Politics

78ನೇ ಸ್ವಾತಂತ್ರ್ಯ ದಿನದಂದು ಪ್ರಧಾನಿ ಮೋದಿ ಉಲ್ಲೇಖಿಸಿದ 10 ಮಹತ್ವದ ವಿಷಯಗಳು.

ನವದೆಹಲಿ: ಭಾರತದ 78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೆಹಲಿಯ ಐತಿಹಾಸಿಕ ಕೆಂಪುಕೋಟೆಯಿಂದ ನೀಡಿದ ಭಾಷಣದಲ್ಲಿ 2047ರೊಳಗೆ ‘ವಿಕಸಿತ ಭಾರತ’ ಅನ್ನು ನಿರ್ಮಿಸುವ ನಿಟ್ಟಿನಲ್ಲಿ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡರು. ಭಾರತವು ತನ್ನ ಸ್ವಾತಂತ್ರ್ಯ ಹೋರಾಟದಿಂದ ಸ್ಪೂರ್ತಿ ಪಡೆದು, 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಬೆಳೆಯಬೇಕೆಂದು ಕರೆ ನೀಡಿದರು.

ಪ್ರಧಾನಮಂತ್ರಿ ಮೋದಿ ಅವರು, “40 ಕೋಟಿ ಜನರು ಗುಲಾಮಗಿರಿಯ ಸಂಕೋಲೆಯಿಂದ ಮುಕ್ತರಾಗಲು ಶಕ್ತಿಯನ್ನು ತೋರಿದ್ದಾರೆ ಎಂದಮೇಲೆ, 140 ಕೋಟಿ ಜನರ ದೃಢಸಂಕಲ್ಪದಿಂದ ಏನನ್ನು ಸಾಧಿಸಬಹುದು ಎಂದು ಊಹಿಸಬಹುದು” ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ಪ್ರಮುಖ ಉಲ್ಲೇಖಗಳು ಇಲ್ಲಿವೆ:

‘ಒಂದು ರಾಷ್ಟ್ರ, ಒಂದು ಚುನಾವಣೆ’:

ಪ್ರಧಾನಮಂತ್ರಿ ಮೋದಿ ಅವರು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಎಂಬ ಪರಿಕಲ್ಪನೆಯನ್ನು ಪ್ರಮುಖವಾಗಿ ಬಿಂಬಿಸಿ, ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಹಿತಾಸಕ್ತರು ಈ ನಿರ್ಣಯದ ಕಡೆಗೆ ಕಾರ್ಯನಿರ್ವಹಿಸುವಂತೆ ಕರೆ ನೀಡಿದ್ದಾರೆ. “ಪ್ರಸ್ತುತ ಚುನಾವಣೆಗಳು ದೇಶದ ಪ್ರಗತಿಗೆ ಅಡ್ಡಿ ಉಂಟುಮಾಡುತ್ತಿವೆ” ಎಂದು ಅವರು ಅಭಿಪ್ರಾಯಪಟ್ಟರು.

ಸಮಾನ ನಾಗರಿಕ ಸಂಹಿತೆಯ ಅಗತ್ಯ:

“ನಾವು ಪಾಲಿಸುತ್ತಿರುವ ನಾಗರಿಕ ಸಂಹಿತೆ, ವಾಸ್ತವವಾಗಿ, ಕೋಮುವಾದದ ನಾಗರಿಕ ಸಂಹಿತೆಯಾಗಿದೆ. ನಮ್ಮ ದೇಶದಲ್ಲಿ ಧರ್ಮದ ಆಧಾರದ ಮೇಲೆ ವ್ಯತ್ಯಾಸಗಳು ಇರುವುದಿಲ್ಲ ಎಂದು ಸಾರಿ ಹೇಳಲು, ಇದು ತುರ್ತು ಅಗತ್ಯವಾಗಿದೆ” ಎಂದು ಪ್ರಧಾನಿ ಮೋದಿ ಅವರು ಹೇಳಿದರು.

ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರ:

ಬಾಂಗ್ಲಾದೇಶದಲ್ಲಿ ನಡೆದ ಘಟನೆಗಳ ಬಗ್ಗೆ ಮಾತನಾಡುತ್ತಾ, “ನಮ್ಮ ನೆರೆ ದೇಶದಲ್ಲಿ ಏನಾದರೂ ಸಂಭವಿಸಿದಾಗ ನಾವು ಕೂಡ ಚಿಂತಿಸಬೇಕಾಗುತ್ತದೆ. ಅಲ್ಲಿ ಪರಿಸ್ಥಿತಿ ಶೀಘ್ರದಲ್ಲೇ ಸುಧಾರಿಸಲಿ ಎಂದು ನಾನು ಬಯಸುವೆನು.” ಎಂದು ಪ್ರಧಾನಿ ಹೇಳಿದರು.

ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಪ್ರಧಾನಿ ಮಾತು:

ಮಹಿಳೆಯರ ಮೇಲಿನ ದೌರ್ಜನ್ಯಗಳ ಬಗ್ಗೆ ತಮ್ಮ ಅಸಮಾಧಾನವನ್ನು ಉಲ್ಲೇಖಿಸುತ್ತಾ, “ಮಹಿಳೆಯರ ಮೇಲಿನ ದೌರ್ಜನ್ಯಗಳ ಬಗ್ಗೆ ಸಾರ್ವಜನಿಕರು ಕೋಪಗೊಂಡಿದ್ದಾರೆ” ಎಂದು ಅವರು ಹೇಳಿ, ತ್ವರಿತ ತನಿಖೆ ಮತ್ತು ಕಠಿಣ ಶಿಕ್ಷೆ ನೀಡುವ ಅಗತ್ಯವನ್ನು ಒತ್ತಿಹೇಳಿದರು.

ಪ್ರಕೃತಿ ವಿಕೋಪಗಳು ಮತ್ತು ಪರಿಹಾರ ಕ್ರಮಗಳು:

ಇತ್ತೀಚಿನ ಪ್ರಕೃತಿ ವಿಕೋಪಗಳಿಗೆ ಬಲಿಯಾದವರ ನೋವುಗಳನ್ನು ಪ್ರಧಾನಮಂತ್ರಿ ಮೋದಿ ಅವರು ಹಂಚಿಕೊಂಡರು. “ಈ ವರ್ಷ ಮತ್ತು ಕಳೆದ ಕೆಲ ವರ್ಷಗಳಿಂದ, ಪ್ರಕೃತಿ ವಿಕೋಪದ ಕಾರಣದಿಂದಾಗಿ ನಮ್ಮ ಚಿಂತೆಗಳು ಹೆಚ್ಚಾಗಿವೆ. ಅನೇಕರು ತಮ್ಮ ಕುಟುಂಬ ಸದಸ್ಯರನ್ನು ಮತ್ತು ಆಸ್ತಿ ಕಳೆದುಕೊಂಡಿದ್ದಾರೆ” ಎಂದು ಅವರು ಹೇಳಿದರು.

ಸೈನಿಕರ ಧೈರ್ಯವನ್ನು ಸ್ಮರಿಸಿ:

ಭಾರತೀಯ ಸಶಸ್ತ್ರ ಪಡೆಗಳ ಧೈರ್ಯ ಮತ್ತು ತ್ಯಾಗವನ್ನು ಪ್ರಧಾನಮಂತ್ರಿ ಅವರು ಪ್ರಶಂಸಿಸಿ, “ಸರ್ಜಿಕಲ್ ಮತ್ತು ಏರ್ ಸ್ಟ್ರೈಕ್ ಮಾಡಿದಾಗ, ಪ್ರತಿಯೊಬ್ಬ ಭಾರತೀಯರೂ ಹೆಮ್ಮೆ ಪಟ್ಟಿರುತ್ತಾರೆ” ಎಂದು ಹೇಳಿದರು.

ಮಧ್ಯಮವರ್ಗದ ಜೀವನಮಟ್ಟ ಸುಧಾರಣೆ:

ಮಧ್ಯಮವರ್ಗದ ಆಶಯಗಳನ್ನು ಪೂರೈಸಲು ಸರ್ಕಾರದ ಬದ್ಧತೆಯನ್ನು ಪುನರುಚಿಸಿದರು. “ಮಧ್ಯಮವರ್ಗದ ಜೀವಿತಮಟ್ಟದ ನಿರೀಕ್ಷೆಗಳ ಸುಧಾರಣೆ” ಎನ್ನುವುದು ಅವರ ಮುಖ್ಯ ಅಭಿಪ್ರಾಯವಾಗಿದೆ.

ಮೂಲಸೌಕರ್ಯ ಅಭಿವೃದ್ಧಿಯ ಹತ್ತು ವರ್ಷಗಳ ಪ್ರಗತಿ:

ಪ್ರಧಾನಮಂತ್ರಿ ಮೋದಿ ಅವರು ಕಳೆದ ದಶಕದಲ್ಲಿ ಮುನ್ನಡೆಯಾದ ಮೂಲಸೌಕರ್ಯ ಅಭಿವೃದ್ಧಿಯನ್ನು ಪ್ರಸ್ತಾಪಿಸಿ, ರಸ್ತೆ, ವಿಮಾನ ನಿಲ್ದಾಣ, ರೈಲು, ವೈದ್ಯಕೀಯ ಕಾಲೇಜುಗಳು, ಮತ್ತು ಧಾರ್ಮಿಕ ಸ್ಥಳಗಳ ಸುಧಾರಣೆಯನ್ನು ಉಲ್ಲೇಖಿಸಿದರು.

ಅಂತರಿಕ್ಷ ಕ್ಷೇತ್ರದ ಪ್ರಗತಿ:

ಅಂತರಿಕ್ಷ ಕ್ಷೇತ್ರದ ಬೆಳವಣಿಗೆ ಕುರಿತು ಮಾತನಾಡುತ್ತಾ, “ಇಂದು ಅನೇಕ ಸ್ಟಾರ್ಟಪ್‌ಗಳು ಈ ಕ್ಷೇತ್ರಕ್ಕೆ ಪ್ರವೇಶಿಸುತ್ತಿವೆ” ಎಂದು ಹೇಳಿ, ಅಂತರಿಕ್ಷ ಕ್ಷೇತ್ರದಲ್ಲಿ ಆವಿಷ್ಕಾರವನ್ನು ಉತ್ತೇಜಿಸಲು ಸರ್ಕಾರದ ಪಾತ್ರವನ್ನು ಉಲ್ಲೇಖಿಸಿದರು.

ಶಿಕ್ಷಣ ಕ್ಷೇತ್ರದ ಸುಧಾರಣೆ:

ಪ್ರಧಾನಮಂತ್ರಿ ಅವರು ವಿಶ್ವಮಟ್ಟದ ಶಿಕ್ಷಣ ಸಂಸ್ಥೆಗಳನ್ನು ಭಾರತದಲ್ಲಿ ಸ್ಥಾಪಿಸಲು ಕರೆನೀಡಿ, ಭಾರತೀಯ ಯುವಕರು ವಿದೇಶಗಳಲ್ಲಿ ಅವಕಾಶಗಳನ್ನು ಹುಡುಕುವುದರ ಬದಲು ಭಾರತದಲ್ಲಿಯೇ ಸಾಧನೆ ಮಾಡಲು ಉತ್ತೇಜನ ನೀಡಿದರು.

Show More

Leave a Reply

Your email address will not be published. Required fields are marked *

Related Articles

Back to top button