ರಾಷ್ಟ್ರಪತಿಗಳಿಂದ ತುರ್ತುಪರಿಸ್ಥಿತಿ ಘೋಷಣೆ.
ನವದೆಹಲಿ: ಇಂದು 25ನೇ ಜೂನ್. ಸರಿಯಾಗಿ 49 ವರ್ಷಗಳ ಹಿಂದೆ ಭಾರತ ಇದೇ ದಿನದಂದು ಕರಾಳ ದಿನವನ್ನು ಕಂಡಿತ್ತು. ಪ್ರಜಾಪ್ರಭುತ್ವವನ್ನು ಲೇವಡಿ ಮಾಡಿದ ದಿನವಿಂದು. ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯವನ್ನು ರಾತ್ರೋರಾತ್ರಿ ತಮ್ಮ ಆಡಳಿತದ ಆಸೆಯ ಚಾಪೆಯಡಿಯಲ್ಲಿ ಹಾಕಿ ಮಡಚಿ ಮೂಲೆಗೆ ಎಸೆಯಲಾಗಿತ್ತು. ಸರ್ಕಾರವನ್ನು ಖಂಡಿಸುವ ಎಲ್ಲಾ ರಾಜಕೀಯ ನಾಯಕರು ಸೇರಿದಂತೆ ಯುವಕರು, ಹಿರಿಯರು ಜೈಲು ಪಾಲಾಗಿದ್ದರು. ಇಂದು ಪ್ರಜಾಪ್ರಭುತ್ವವನ್ನು ಕಾಪಾಡಲು ಇರುವುದಾಗಿ ಹೇಳುತ್ತಿರುವ ಪಕ್ಷದ ನಾಯಕಿಯೇ ಈ ಘೋರ ಇತಿಹಾಸದ ಸೂತ್ರಧಾರಿ ಆಗಿದ್ದರು ಎಂಬುವುದೇ ವಿಷಾದ.
ಜೂನ್ 25, 1975ರಂದು ಅಂದಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರನ್ನು ಮುಂದಿಟ್ಟು, ತನ್ನ ವಿರೋಧಿಗಳನ್ನು ಮಟ್ಟ ಹಾಕಲು ಮುಂದಾಗಿತ್ತು ಅಂದಿನ ಸರ್ಕಾರ. ‘ಆಂತರಿಕ ಗಲಭೆ’ ಎಂದು ಕಾರಣ ನೀಡಿ ದೇಶದಲ್ಲಿ ಮೊದಲ ಬಾರಿಗೆ ವಿಧಿ 352 ನ್ನು ಜಾರಿಗೆ ತರಲಾಯಿತು. ಇದಕ್ಕೆ ಮೂಲ ಕಾರಣ, ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು 1971ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅಸಾಂವಿಧಾನಿಕ ರೀತಿಯಲ್ಲಿ ಗೆದ್ದಿದ್ದಾರೆ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಅಧಿಕಾರ ಕೈತಪ್ಪುವ ಹಾಗೂ ಚುನಾವಣೆ ಅನೂರ್ಜಿತ ಆಗುವುದನ್ನು ತಡೆಯಲು ಈ ತುರ್ತುಪರಿಸ್ಥಿತಿ ಘೋಷಣೆ ಮಾಡಿಸಲಾಯಿತು.
ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ, 1967ರಲ್ಲಿ ಹಿಂಪಡೆದಿದ್ದ ಕಾಯ್ದೆ ಆಗಿದ್ದ ಭಾರತದ ರಕ್ಷಣಾ ನಿಯಮಗಳ ಕಾಯ್ದೆಯನ್ನು ಪುನಃ ನವೀಕರಿಸಿ ಜಾರಿಗೆ ತರಲಾಯಿತು. ಇದರೊಂದಿಗೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ವಿದೇಶಿ ವಿನಿಮಯ ಸಂರಕ್ಷಣೆ ಮತ್ತು ಕಳ್ಳ ಸಾಗಾಣಿಕೆ ಚಟುವಟಿಕೆಗಳ ತಡೆ ಕಾಯ್ದೆಯನ್ನು ಕೂಡ ತರಾತುರಿಯಲ್ಲಿ ಜಾರಿಗೆ ತರಲಾಯಿತು. ತುರ್ತುಪರಿಸ್ಥಿತಿ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾದ, ಸಿಪಿಎಂ ಮುಖಂಡ ಜ್ಯೋತಿರ್ಮೋಯ್ ಬಸು, ಅಂದಿನ ಜನ ಸಂಘದ ಮುಖಂಡ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಅಡ್ವಾಣಿ, ಇಂದಿನ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಸೇರಿದಂತೆ ಹಲವಾರು ನಾಯಕರು ಸೆರೆಮನೆ ಸೇರಿದ್ದರು. ತುರ್ತುಪರಿಸ್ಥಿತಿ ಕಾಲದಲ್ಲಿ ಎಂಐಎಸ್‌ಎ ಕಾಯ್ದೆ ಅಡಿಯಲ್ಲಿ 34,988 ಜನ, ಡಿಐಎಸ್‌ಐಆರ್ ಕಾಯ್ದೆ ಅಡಿಯಲ್ಲಿ 75,818 ಜನರು ಬಂಧನಕ್ಕೆ ಒಳಗಾಗಿದ್ದರು.
ಈ ತುರ್ತುಪರಿಸ್ಥಿತಿ ಘೋಷಣೆಯಿಂದಲೇ ಕಾಂಗ್ರೆಸ್ ಸರ್ಕಾರ ಅಧಿಕಾರ ಕಳೆದುಕೊಂಡಿತು. ಮೊಟ್ಟಮೊದಲ ಜನತಾ ಪಕ್ಷ ಅಧಿಕಾರಕ್ಕೆ ಬಂದಿತು. ಇಂತಹ ಕರಾಳ ಇತಿಹಾಸ ಮತ್ತೊಮ್ಮೆ ಭಾರತದ ಇತಿಹಾಸದಲ್ಲಿ ಮರುಕಳಿಸದೆ ಇರಲಿ ಎಂಬುದೇ ಎಲ್ಲರ ಆಶಯ.