‘ನನ್ನ ತೆರಿಗೆ, ನನ್ನ ಹಕ್ಕು’ ಕಾಂಗ್ರೆಸ್ ಹೊಸ ರಾಜಕೀಯ ಬಾಣ.
ಇತ್ತಿಚೆಗೆ ಬಜೆಟ್ ಮಂಡನೆಯಾದ ಬೆನ್ನಲ್ಲೇ ದಕ್ಷಿಣದ ರಾಜ್ಯಗಳಿಗೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು ದೂಷಿಸಿದ ಕರ್ನಾಟಕ ಕಾಂಗ್ರೆಸ್ ಸಂಸದರು ಈಗ ‘ದೆಹಲಿ ಚಲೋ’ ಎಂಬ ಪ್ರತಿಭಟನೆಗೆ ಮುಂದಾಗಿದ್ದಾರೆ.
ಕೇಂದ್ರದ ವಿರುದ್ಧ ರಾಜ್ಯ ಕಾಂಗ್ರೆಸ್ ಸರ್ಕಾರ, ತೆರಿಗೆ ಹಂಚಿಕೆಯ ವಿರುದ್ಧ ದೆಹಲಿಯ ಚಾಂದಿನಿ ಚೌಕ್ ಬಳಿ ಪ್ರತಿಭಟನೆ ನಡೆಸಲಿದೆ ಎಂದು ಹೇಳಿಕೊಂಡಿತ್ತು. ಮೊದಲು ಕೇವಲ ಕಾಂಗ್ರೆಸ್ ಶಾಸಕರು ಹಾಗೂ ಸಂಸದರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ ರಾಜ್ಯ ಸರ್ಕಾರ, ಇಂದು ರಾಜ್ಯದ ಎಲ್ಲಾ ಪಕ್ಷದ ಶಾಸಕರು ಹಾಗೂ ಸಂಸದರನ್ನು ಪ್ರತಿಭಟನೆಯಲ್ಲಿ ಭಾಗಿಯಾಗುವಂತೆ ಮನವಿ ಮಾಡಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಈ ಚಾಣಾಕ್ಷ ನಡೆ, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಬಿಸಿ ತುಪ್ಪದಂತಾಗಿದೆ. ತೆರಿಗೆ ಹಂಚಿಕೆಯಲ್ಲಿ ಆದ ಅನ್ಯಾಯ ಕಾಂಗ್ರೆಸ್ ಪಕ್ಷಕ್ಕೆ ಆಗಿದ್ದಲ್ಲ, ಅದು ಇಡೀ ರಾಜ್ಯಕ್ಕೆ ಆದ ಅನ್ಯಾಯ. ಇದರ ವಿರುದ್ಧ ಸರ್ವರೂ ದ್ವನಿ ಎತ್ತಬೇಕು ಎಂದು ಮನವಿ ಮಾಡಿದ್ದಾರೆ ಕಾಂಗ್ರೆಸ್ ನಾಯಕರು. ಕಾಂಗ್ರೆಸ್ ಪಕ್ಷದ ಸರ್ವ ಶಾಸಕ ಮತ್ತು ಸಂಸದರ ಪಡೆ ಈಗಾಗಲೇ ದೆಹಲಿಗೆ ರವಾನೆಯಾಗುತ್ತಿದೆ.
ಇತ್ತ ಬಿಜೆಪಿ ಪಕ್ಷ ಮತ್ತು ಜೆಡಿಎಸ್ ಪಕ್ಷದ ಸ್ಥಿತಿ ಅಡಕತ್ತರಿಯಲ್ಲಿ ಸಿಕ್ಕ ಅಡಿಕೆಯಂತಾಗಿದೆ. ಪ್ರತಿಭಟನೆಯಲ್ಲಿ ಪಾಲ್ಗೊಂಡರೆ ರಾಷ್ಟ್ರೀಯ ನಾಯಕರು ಗರಂ ಆಗುತ್ತಾರೆ. ಹಾಗೆಯೇ ಪಾಲ್ಗೊಳ್ಳದೆ ಇದ್ದರೆ ರಾಜ್ಯ ಮತದಾರರ ದೃಷ್ಟಿಯಲ್ಲಿ ರಾಜ್ಯಭೃಷ್ಟರು ಎಂದು ಅನ್ನಿಸಿ ಕೊಳ್ಳಬೇಕಾಗುತ್ತದೆ. ಇದರ ಮಧ್ಯೆ “ರಾಜ್ಯಗಳಿಗೆ ತೆರಿಗೆ ಹಂಚಿಕೆ ಮಾಡುವುದು ಹಣಕಾಸು ಆಯೋಗವೇ ಹೊರತು ಕೇಂದ್ರ ಸರ್ಕಾರವಲ್ಲ”. ಎಂಬ ಹೇಳಿಕೆಗಳು ಬಿಜೆಪಿ ವಲಯದಿಂದ ಬರುತ್ತಿದೆ.
ಅಂತೂ ನಾಳೆ ದೆಹಲಿಯಲ್ಲಿ ಯಾರ್ಯಾರು ಇರಲಿದ್ದಾರೆ? ಈ ನಡೆಯಿಂದ ದಕ್ಷಿಣದ ರಾಜ್ಯಗಳಲ್ಲಿ ಏನೇನು ಪರಿಣಾಮಗಳು ಬೀರಲಿದೆ? ಹಾಗೂ ಇದು ಮೋದಿಯವರ 400ರ ಗುರಿಯ ಮೇಲೆ ಪ್ರಭಾವ ಬೀರಲಿದೆಯೇ? ಎಂಬ ಪ್ರಶ್ನೆಗಳಿಗೆ ಉತ್ತರ ಇನ್ನೂ ಕಾದು ನೋಡಬೇಕಿದೆ.