ಮತ್ತೆ ಪ್ರಾರಂಭವಾಗಿದೆ ‘ರಾಮೇಶ್ವರಂ ಕೆಫೆ’.
ಬೆಂಗಳೂರು: 9 ದಿನಗಳ ನಂತರ ಕರಾಳ ನೆನಪನ್ನು ಮರೆತು ಮತ್ತೆ ಪುಟಿದೆದ್ದಿದೆ ‘ರಾಮೇಶ್ವರಂ ಕೆಫೆ’. ಅಘಾತಕಾರಿ ಬಾಂಬ್ ಸ್ಪೋಟದ ನಂತರ ಇಷ್ಟು ಬೇಗ ಒಂದು ಕೆಫೆ ಚೇತರಿಸಿಕೊಳ್ಳುತ್ತದೆ ಎಂದರೆ ಅದು ಎಲ್ಲರಿಗೂ ಸ್ಪೂರ್ತಿಯೇ ಸರಿ.
ಮಾರ್ಚ್ 1 ರಂದು ಸರಿಸುಮಾರು ಮಧ್ಯಾಹ್ನ 12:56 ಕ್ಕೆ ಬೆಂಗಳೂರಿನ ಬ್ರೂಕ್ ಫೀಲ್ಡ್ ನಲ್ಲಿ ಸ್ಥಾಪಿತವಾದ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟವಾಗಿದೆ ಎಂಬ ವರದಿಯು ಜನರನ್ನು ಬೆಚ್ಚಿ ಬೀಳಿಸಿತ್ತು.
ಈ ಕುರಿತು ತನಿಖೆಯನ್ನು ಕೈಗೆತ್ತಿಕೊಂಡ ಎನ್ಐಎ ತಂಡ, ಬಾಂಬ್ ಸ್ಫೋಟ ಮಾಡಿದವನ ಸಿಸಿಟಿವಿ ಚಿತ್ರಾವಳಿಗಳನ್ನು ಹೊರ ತಂದು ಆತನ ಜಾಲ ಹಿಡಿದು ಹೊರಟಿದೆ. ಅದೇ ರೀತಿ ಈ ಸ್ಫೋಟಕ್ಕೆ ಸಂಬಂಧಿಸಿದ ಕೆಲವು ಆರೋಪಿಗಳನ್ನ ಈಗಾಗಲೇ ಬಂದಿಸಿ ವಿಚಾರಣೆ ನಡೆಸುತ್ತಿದೆ.
ಈಗಾಗಲೇ ಈ ಘಟನೆ ನಡೆದು 9 ದಿನಗಳು ಕಳೆದಿದ್ದು, ರಾಮೇಶ್ವರಂ ಕೆಫೆ ಘಟಿಸಿದ ಕಹಿ ನೆನಪುಗಳನ್ನು ಮರೆತು ಮತ್ತೆ ಹೊಸ ಚೈತನ್ಯದಿಂದ ಪುನಃ ತನ್ನ ಸೇವೆಯನ್ನು ಆರಂಭಿಸಿದೆ. ಮತ್ತೆ ಇಂತಹ ಘಟನೆ ಮರುಕಳಿಸಬಾರದು ಎಂಬ ಉದ್ದೇಶದಿಂದ ಮೆಟಲ್ ಡಿಟೆಕ್ಟರ್‌ನ್ನು ಅಳವಡಿಸಲಾಗಿದೆ. ಹಾಗೆಯೇ, ಗ್ರಾಹಕರು ತರುವ ಪ್ರತಿಯೊಂದು ವಸ್ತುವನ್ನು ಇನ್ನು ಮುಂದೆ ತಪಾಸಣೆ ಮಾಡಲಾಗುವುದು ಎಂದು ಕೆಫೆಯ ಆಡಳಿತ ಮಂಡಳಿ ತಿಳಿಸಿದೆ.
ಇದೇ ಸಂದರ್ಭದಲ್ಲಿ ಮಾತನಾಡಿದ ರಾಮೇಶ್ವರಂ ಕೆಫೆ ಸ್ಥಾಪಕರು ಹಾಗೂ ಮಾಲೀಕರಾದ ರಾಘವೇಂದ್ರ ಅವರು “ಇಂದು ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದ್ದು, ಬೆಳಿಗ್ಗೆ 6:30 ಕ್ಕೆ ರಾಷ್ಟ್ರಗೀತೆಯನ್ನು ಹಾಡು ಮೂಲಕ ಕೆಫೆಯನ್ನು ಮತ್ತೆ ಪ್ರಾರಂಭಿಸಲಾಯಿತು. ನಾವು ಭಾರತೀಯರು ಇದ್ಯಾವುದಕ್ಕೂ ಜಗ್ಗುವುದಿಲ್ಲ. ತನಿಖೆಯು ಶೀಘ್ರಗತಿಯಲ್ಲಿ ನಡೆಯುತ್ತಿದ್ದು, ಅಪರಾಧಿಗಳಿಗೆ ಸರಿಯಾದ ಶಿಕ್ಷೆ ಆಗಲಿದೆ ಎಂಬ ನಂಬಿಕೆ ನಮಗಿದೆ.” ಎಂದಿದ್ದಾರೆ.