ಕೇಂದ್ರ ಸರ್ಕಾರ 11 ಡಿಸೆಂಬರ್ 2019 ರಂದು ಪೌರತ್ವ ಕಾಯ್ದೆ 1955 ಕ್ಕೆ ತಿದ್ದುಪಡಿ ತಂದು 2014 ಡಿಸೆಂಬರ್ 31ರವರೆಗೆ ಭಾರತಕ್ಕೆ ಬಂದಂತಹ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಭಾರತಕ್ಕೆ ಬಂದಂತಹ ಹಿಂದೂಗಳು, ಸಿಖ್‌ರು, ಬೌದ್ಧರು, ಜೈನರು, ಪಾರ್ಸಿಗಳು, ಹಾಗೂ ಕ್ರಿಶ್ಚಿಯನರಿಗೆ ಭಾರತದ ಪೌರತ್ವ ನೀಡಲು ಮುಂದಾಗಿತ್ತು.
ಈ ಕಾಯ್ದೆಯ ವಿರುದ್ಧವಾಗಿ ಅನೇಕ ಪಕ್ಷಗಳು ಮತ್ತು ಸಂಘಟನೆಗಳು ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ ನೂರಾರು ಪ್ರತಿಭಟನಾಕಾರರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ದೇಶದಲ್ಲಿರುವ ಮುಸ್ಲಿಂ ಜನಾಂಗವನ್ನು ದೇಶದಿಂದ ಹೊರಗೆ ಹಾಕುವ ಒಳಸಂಚು ನಡೆಯುತ್ತಿದೆ ಎಂದು ವಿರೋಧ ಪಕ್ಷಗಳು ಈ ಕಾಯ್ದೆಯನ್ನು ದೂಷಿಸಿದ್ದರು.
ಇದಾದ ಹಲವು ವರ್ಷಗಳ ತನಕ ಸಿಎಎ ತಿದ್ದುಪಡಿ ಕಾಯ್ದೆ ಜಾರಿಯಾಗದೆ ಹಾಗೆ ಉಳಿದಿತ್ತು. ಆದರೆ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ರವರು ಕೆಲವು ದಿನಗಳ ಹಿಂದೆ, “ನಮ್ಮ ಸರ್ಕಾರ ಲೋಕಸಭೆ ಚುನಾವಣೆಗೂ ಮುನ್ನ ಈ ಕಾಯ್ದೆಯನ್ನು ಜಾರಿಗೆ ತರುತ್ತೇವೆ.”ಎಂಬ ಭರವಸೆಯನ್ನು ನೀಡಿದ್ದರು.
ಅದೇ ರೀತಿಯಲ್ಲಿ ಮಾರ್ಚ್ 11, 2024 ರಂದು ಕೇಂದ್ರ ಸರ್ಕಾರ ಈ ಕಾಯ್ದೆಯನ್ನು ಜಾರಿಗೆ ತಂದಿದೆ. ಈ ಮೂಲಕ ಆಶ್ರಯ ಹುಡುಕಿ ಬಂದಂತಹ ಅಪಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಅಲ್ಪಸಂಖ್ಯಾತರಿಗೆ ಈ ಕಾಯ್ದೆ ಪೌರತ್ವ ನೀಡಲಿದೆ.