ಶಿವಣ್ಣ ‘ಭೈರತಿ ರಣಗಲ್’ ರಿಲೀಸ್ ಡೇಟ್ ಫಿಕ್ಸ್..!ಸ್ವಾತಂತ್ರ್ಯೋತ್ಸವಕ್ಕೆ ಬರ್ತಿದೆ ಮಫ್ತಿ ಪ್ರೀಕ್ವೆಲ್..!
ಮಫ್ತಿ ಖ್ಯಾತಿಯ ನಿರ್ದೇಶಕ ನರ್ತನ್ ಹಾಗೂ ಕರುನಾಡ ಚಕ್ರವರ್ತಿ ಡಾ. ಶಿವರಾಜ್ಕುಮರ್ ಕಾಂಬಿನೇಷನ್ನ ಬಹುನಿರೀಕ್ಷಿತ ‘ಭೈರತಿ ರಣಗಲ್’ ಸಿನೆಮಾ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಆಗಸ್ಟ್ 15, 2024 ರಂದು ‘ಭೈರತಿ ರಣಗಲ್’ ತೆರೆಗೆ ಬರಲಿದೆ. ಗೀತಾ ಪಿಕ್ಚರ್ಸ್ ಬ್ಯಾನರಡಿ ಗೀತಾ ಶಿವರಾಜ್ಕುಮಾರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಭೈರತಿ ರಣಗಲ್ ಗ್ಯಾಂಗ್ಸ್ಟರ್ ಆಗೋದ್ಯಾಕೆ?
2017ರಲ್ಲಿ ತೆರೆಕಂಡು ಭಾರಿ ಮೆಚ್ಚುಗೆಗೆ ಪಾತ್ರವಾಗಿದ್ದ ಮಫ್ತಿ ಚಿತ್ರದ ಪ್ರೀಕ್ವೆಲ್ ಇದಾಗಿದ್ದು, ಮಫ್ತಿಯಲ್ಲಿ ಶಿವಣ್ಣನ ಪಾತ್ರವನ್ನು ಬಹಳ ಮೆಚ್ಚಿಕೊಂಡಿದ್ದ ಅಭಿಮಾನಿಗಳು ಶಿವರಾಜ್ಕುಮಾರ್ರನ್ನು ಈ ಚಿತ್ರದಲ್ಲಿ ಕಣ್ತುಂಬಿಕೊಳ್ಳಲು ಉತ್ಸುಕರಾಗಿ ಕಾಯುತ್ತಿದ್ದಾರೆ..
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ನರ್ತನ್, ಈ ಚಿತ್ರ ಮಾಡೋಕೆ ಮುಖ್ಯ ಕಾರಣ ಶಿವಣ್ಣನ ಅಭಿಮಾನಿಗಳು, ಯಾವಾಗಲೂ ಈ ಪಾತ್ರದ ಬಗ್ಗೆ ಕೇಳ್ತಾ ಇದ್ರು. ಅವರಿಗಾಗಿಯೇ ಈ ಸಿನೆಮಾ ಮಾಡಿದ್ದೀವಿ. ಮಫ್ತಿಯಲ್ಲಿ ಗ್ಯಾಂಗ್ಸ್ಟರ್ ಆಗಿ ಕಾಣಿಸಿಕೊಂಡಿದ್ದ ಭೈರತಿ ರಣಗಲ್ನ ಹಿನ್ನೆಲೆ ಈ ಚಿತ್ರದಲ್ಲಿದೆ. ಭೈರತಿ ರಣಗಲ್ ಗ್ಯಾಂಗ್ಸ್ಟರ್ ಆಗೋದ್ಯಾಕೆ ಎಂಬುದು ಈ ಚಿತ್ರದ ಎಳೆ ಎಂದು ಹೇಳಿದರು. ಅದಾಗಲೇ 70% ಚಿತ್ರೀಕರಣ ಮುಕ್ತಾಯಗೊಂಡಿದ್ದು, ತಮಿಳು, ತೆಲುಗು ಜೊತೆಗೆ ಹಿಂದಿಯಲ್ಲೂ ತೆರೆ ಕಾಣುವ ಸಾಧ್ಯತೆಯಿದೆ ಎಂದರು.
ಮಫ್ತಿ ಮಾಡೋಕೆ ಭಯ ಇತ್ತು..!
ಭೈರತಿ ರಣಗಲ್ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಶಿವಣ್ಣ, ಆಗ ಮಫ್ತಿ ಸಿನೆಮಾ ಒಪ್ಪಿಕೊಳ್ಲ ಬೇಡ್ವ ಅಂತ ಗೊಂದಲ ಇತ್ತು? ಗೀತಾ ಕೂಡ ಯೋಚನೆ ಮಾಡಿ ಅಂದಿದ್ರು. ಆದರೆ ನರ್ತನ್ ಬಂದು ಕಥೆ ಹೇಳಿದ್ಮೇಲೆ ಒಪ್ಕೊಂಡೆ. ಬಹಳ ಖುಷಿ ಇದೆ ನನಗೆ. ಭೈರತಿ ರಣಗಲ್ ಹೆಸರೇ ಎಷ್ಟು ವಿಶೇಷ ಅಲ್ವಾ? ಭೈರತಿ ರಣಗಲ್ ಸಿನೆಮಾಗೆ ನಿಮ್ಮೆಲ್ಲರ ಪ್ರೋತ್ಸಾಹ ಇರಲಿ ಎಂದು ತಮ್ಮ ಮಾತುಗಳನ್ನು ಹಂಚಿಕೊಂಡರು.
ಭೈರತಿ ರಣಗಲ್ ತಾರಾಗಣ
ಚಿತ್ರದಲ್ಲಿ ರುಕ್ಮಿಣಿ ವಸಂತ್, ರಾಹುಲ್ ಬೋಸ್, ದೇವರಾಜ್, ಅವಿನಾಶ್, ಮಧು ಗುರುಸ್ವಾಮಿ, ಛಾಯಾ ಸಿಂಗ್ ಮುಂತಾದವರು ಅಭಿನಯಿಸುತ್ತಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ, ರವಿ ಬಸ್ರೂರ್ ಸಂಗೀತವಿದೆ.