ಮತ್ತೆ ಎದುರಾದ ಗಂಭೀರ ಮತ್ತು ಕೊಹ್ಲಿ. ಚಿನ್ನಸ್ವಾಮಿಯಲ್ಲಿ ನಡೆದಿದ್ದು ಏನು?
ಬೆಂಗಳೂರು: ನಿನ್ನೆ ಮಾರ್ಚ್ 29ರಂದು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಿನ ಪಂದ್ಯ ಈ ಘಟನೆಗೆ ಸಾಕ್ಷಿಯಾಯಿತು. ನಿನ್ನೆ ಮತ್ತೆ ಎದುರಾದರು ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿ.
ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ದಶಕಗಳಿಂದ ಬದ್ಧ ವೈರಿಗಳಂತೆ ಒಬ್ಬರ ವಿರುದ್ಧ ಒಬ್ಬರು ಕ್ರೀಡಾಂಗಣದಲ್ಲಿ ಎದುರಾಗುತ್ತಿದ್ದ ಗೌತಿ ಹಾಗೂ ಕೊಹ್ಲಿ ಜೋಡಿ ನಿನ್ನೆ ಮತ್ತೆ ಎದುರಾದರು. ಕಳೆದ ಐಪಿಎಲ್ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜಾಯಿಂಟ್ಸ್ ವಿರುದ್ಧದ ಪಂದ್ಯದಲ್ಲಿ ಗಂಭೀರ ಹಾಗೂ ಕೊಹ್ಲಿ ಇಬ್ಬರು ಇರುಸು ಮುರಿಸಾದ ಕ್ಷಣಗಳು ಕಂಡುಬಂದಿತ್ತು.
ಈ ಹಿಂದೆಯೂ ಸಹ ಇಂತಹ ಘಟನೆಗಳು ಇವರಿಬ್ಬರ ನಡುವೆ ನಡೆದಿತ್ತು. ಆದರೆ ನಿನ್ನೆಯ ಪಂದ್ಯದ ಮಧ್ಯೆ ಅಂಪೈರ್ ಸಮಯ ವಿರಾಮ ನೀಡಿದ ಸಂದರ್ಭದಲ್ಲಿ ಗ್ರೌಂಡ್‌ಗೆ ಕಾಲಿಟ್ಟ ಗೌತಮ್ ಗಂಭೀರ್, ಬ್ಯಾಟಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಅವರ ಬಳಿ ಬಂದು, ಕೈಕುಲುಕಿ ಕುಶಲೋಪರಿ ವಿಚಾರಿಸಿದರು.
ಈ ಇಬ್ಬರು ಕ್ರಿಕೆಟ್ ದಂತಕತೆಗಳು ಒಂದಾಗುವ ಈ ಕ್ಷಣವನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆರೆದಂತಹ ಕ್ರಿಕೆಟ್ ಅಭಿಮಾನಿಗಳು ಕಣ್ಣು ತುಂಬಿಕೊಂಡರು. ಇಂತಹ ಮರೆಯಲಾಗದ ಕ್ಷಣಗಳಿಂದಲೇ ಐಪಿಎಲ್ ಇಂದು ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿದೆ.