“ಬಸ್ ಪ್ರಯಾಣದರ ಏರಿಕೆ ಇಲ್ಲ.”- ರಾಮಲಿಂಗಾ ರೆಡ್ಡಿ.
ಬೆಂಗಳೂರು: ಪೆಟ್ರೋಲ್ ಹಾಗೂ ಡೀಸೆಲ್ ದರಗಳ ಏರಿಕೆಯಿಂದ ರಾಜ್ಯದಲ್ಲಿ ಬಸ್ ಪ್ರಯಾಣ ದರ ಕೂಡ ಏರಿಕೆ ಆಗಲಿದೆ ಎಂಬ ಚರ್ಚೆ ನಡೆಯುತ್ತಿದೆ. ಆದರೆ ರಾಜ್ಯ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಈ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
“ಕೆಎಸ್ಆರ್ಟಿಸಿ ಸಹಿತ ಎಲ್ಲಾ ನಾಲ್ಕು ನಿಗಮಗಳಲ್ಲಿ ಬಸ್ ಪ್ರಯಾಣದರ ಏರಿಸುವ ಯಾವುದೇ ಚಿಂತನೆ ಇಲ್ಲ.” ಎಂದು ರಾಮಲಿಂಗಾ ರೆಡ್ಡಿ ಅವರು ತಿಳಿಸಿದ್ದಾರೆ. ಸಾಮಾನ್ಯವಾಗಿ ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ವ್ಯತ್ಯಾಸ ಕಂಡಾಗ, ಸಾರಿಗೆ ಇಲಾಖೆಯಲ್ಲಿನ ಬಸ್ ಪ್ರಯಾಣ ದರದಲ್ಲಿಯೂ ಕೂಡ ವ್ಯತ್ಯಾಸ ಕಾಣಲಾಗುತ್ತದೆ. ಯಾಕೆಂದರೆ ಇಂಧನಗಳನ್ನು ಅಧಿಕ ಬೆಲೆಯಲ್ಲಿ ಕೊಳ್ಳಬೇಕಾದರೆ, ಪ್ರಯಾಣದರೂ ಕೂಡ ಏರಿಕೆಯಾಗಬೇಕಾಗುತ್ತದೆ, ಇಲ್ಲದಿದ್ದರೆ ಇಲಾಖೆ ನಷ್ಟವನ್ನು ಅನುಭವಿಸುತ್ತದೆ. ಇದು ಸಾಮಾನ್ಯ ನಿಯಮವಾಗಿದೆ.
ಆದರೆ ಇಲ್ಲಿ ಸಾರಿಗೆ ಸಚಿವರ ಯಾವುದೇ ರೀತಿಯ ಪ್ರಯಾಣದರ ಹೆಚ್ಚಿಗೆ ಮಾಡಲಾಗುವುದಿಲ್ಲ ಎಂಬ ಹೇಳಿಕೆ, ತೀವ್ರ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಪ್ರಯಾಣದರ ಹೆಚ್ಚಿಗೆ ಮಾಡದಿದ್ದರೆ ಇಲಾಖೆ ನಷ್ಟ ಅನುಭವಿಸಬೇಕಾಗುತ್ತದೆ. ಅದೇ ರೀತಿ ಶಕ್ತಿ ಯೋಜನೆಯ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕೂಡ ಸರ್ಕಾರಕ್ಕೆ ಒಂದು ಆರ್ಥಿಕ ಹೊರೆ ಕೂಡ ಹೌದು. ಇವೆಲ್ಲವನ್ನೂ ಮೀರಿ ಸಾರಿಗೆ ಇಲಾಖೆ ತನ್ನ ವಾರ್ಷಿಕ ಬ್ಯಾಲೆನ್ಸ್ ಶೀಟನ್ನು ಹೇಗೆ ನಿರ್ವಹಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.