Politics

ಮುಖ್ಯಮಂತ್ರಿಯವರಿಂದ 78ನೇ ಸ್ವಾತಂತ್ರ್ಯೋತ್ಸವದ ಶುಭಾಶಯ: ಸಮಾನ ಸಮಾಜದ ನಿರ್ಮಾಣಕ್ಕಾಗಿ ಕರೆ.

ಬೆಂಗಳೂರು: ಭಾರತದ 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಾಡಿನ ಜನತೆಗೆ ಶುಭ ಸಂದೇಶವನ್ನು ರವಾನಿಸಿದ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ರಾಜ್ಯ ಸರ್ಕಾರವು ಕಳೆದ ಒಂದು ವರ್ಷದಲ್ಲಿ ಹಮ್ಮಿಕೊಂಡಿರುವ ಪ್ರಮುಖ ಕಲ್ಯಾಣ ಕಾರ್ಯಕ್ರಮಗಳನ್ನು ವಿವರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತರ ಬಗ್ಗೆ ವಿಶೇಷ ಗಮನ ಹರಿಸಿ, “ಕಳೆದ ವರ್ಷ ಅನಾವೃಷ್ಟಿಯಿಂದ ಸಂಕಷ್ಟ ಅನುಭವಿಸಿದ 38,58,737 ರೈತರಿಗೆ 3454.22 ಕೋಟಿ ರೂಪಾಯಿ ಬೆಳೆಹಾನಿ ಪರಿಹಾರ ವಿತರಿಸಲಾಗಿದೆ” ಎಂದು ಹೇಳಿದರು. ಈ ಬಾರಿ ಅತಿವೃಷ್ಟಿಯಿಂದಾಗಿ ತೊಂದರೆಗೊಳಗಾದ ಜನತೆಗೆ ಕೂಡಾ ಸರ್ಕಾರ ಶೀಘ್ರ ಪರಿಹಾರ ಒದಗಿಸಲು ಸಿದ್ಧವಾಗಿದೆ.

ರಾಜ್ಯ ಸರ್ಕಾರವು ‘ಸಮಾನ ಸಮಾಜ’ ನಿರ್ಮಾಣದ ಗುರಿಯೊಂದಿಗೆ ತಮ್ಮ ಗ್ಯಾರಂಟಿ ಯೋಜನೆಗಳು ಜನರ ಜೀವನಕ್ಕೆ ಚೇತನ ತಂದಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. 2023-24ನೇ ಸಾಲಿನಲ್ಲಿ 54,427 ಕೋಟಿ ರೂಪಾಯಿ ವಿದೇಶಿ ಬಂಡವಾಳ ಹೂಡಿಕೆ ಆಕರ್ಷಿಸಿ, ಕರ್ನಾಟಕವು ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ.

ಮುಖ್ಯಮಂತ್ರಿ ಅವರು ರಾಜ್ಯದ ವಾಣಿಜ್ಯ ವಹಿವಾಟು ಕ್ಷೇತ್ರದ ಬಲಿಷ್ಟತೆಯನ್ನು ಉಲ್ಲೇಖಿಸಿ, 2023-24ನೇ ಸಾಲಿನಲ್ಲಿ ರಾಜ್ಯವು 1,66,545 ಮಿಲಿಯನ್ ಯುಎಸ್ ಡಾಲರ್ ರಫ್ತು ಮಾಡಿ ದೇಶದಲ್ಲಿ ಮುನ್ನಡೆಯಲ್ಲಿದೆ ಎಂದು ತಿಳಿಸಿದರು.

ಜಲ ಸಂಪತ್ತಿನ ಯೋಜನೆಗಳನ್ನು ಬಲಪಡಿಸುವುದಾಗಿ ಹೇಳಿ, ಎತ್ತಿನಹೊಳೆ ಯೋಜನೆಗೆ 855.02 ಕೋಟಿ ರೂಪಾಯಿ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆಗೆ 151.16 ಕೋಟಿ ರೂಪಾಯಿಯ ಅನುದಾನವನ್ನು ಒದಗಿಸಲಾಗಿದೆ ಎಂದು ವಿವರಿಸಿದರು.

ಸಮಾಜದ ಎಲ್ಲ ವರ್ಗಗಳ ಅಭಿವೃದ್ದಿಯೇ ನಮ್ಮ ಬದ್ಧತೆ ಎಂಬುದನ್ನು ಪುನರುಚ್ಚರಿಸಿದರು. “ಸ್ವಾತಂತ್ರ್ಯದ ಫಲವನ್ನು ಸಮಾಜದ ಕಟ್ಟಕಡೆಯ ಪ್ರಜೆಗೂ ತಲುಪಿಸುವುದು ನಮ್ಮ ಕನಸು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭರವಸೆ ನೀಡಿದರು.

Show More

Leave a Reply

Your email address will not be published. Required fields are marked *

Related Articles

Back to top button