ಸಿದ್ದರಾಮಯ್ಯನವರಿಗೆ ಯಡಿಯೂರಪ್ಪನವರ ಉದಾಹರಣೆ ನೀಡಿದ ಪ್ರತಾಪ್ ಸಿಂಹ.
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ದೋಷಾರೋಪಣೆಗೆ ಅನುಮತಿ ನೀಡಿದ ಬೆನ್ನಲ್ಲೇ, ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಸಿದ್ದರಾಮಯ್ಯನವರಿಗೆ ಒಂದು ಖಡಕ್ ಪ್ರಶ್ನೆ ಮುಂದೆ ಇಟ್ಟಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸಿಂಹ ಅವರು, “ಸಿದ್ದರಾಮಯ್ಯ ಸರ್, ಅಡ್ವಾಣಿ, ಯಡಿಯೂರಪ್ಪ ಸಾಹೇಬರನ್ನು ಅನುಕರಣೆ ಮಾಡಿ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡುತ್ತಿರೋ ಅಥವಾ ಅರವಿಂದ ಕೇಜಿವಾಲ್ ಹಾದಿ ಹಿಡಿಯುತ್ತೀರೋ?” ಎಂದು ಖಾರವಾಗಿ ಪ್ರಶ್ನೆ ಹಾಕಿದ್ದಾರೆ.
ಹಿಂದೆ ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿ ಇದ್ದಾಗ, ಅಂದಿನ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರದ್ವಾಜ್ ಅವರು, ಅಕ್ರಮ ಅದಿರು ಪ್ರಕರಣದಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ಯಡಿಯೂರಪ್ಪನವರ ಮೇಲೆ ದೋಷಾರೂಪಣೆ ಮಾಡಲು ಅನುವು ಮಾಡಿಕೊಟ್ಟಿದ್ದರು. ಆಗ ಯಡಿಯೂರಪ್ಪನವರು ನೈತಿಕ ಹೊಣೆ ಹೊತ್ತು ತಮ್ಮ ರಾಜೀನಾಮೆ ನೀಡಿ, ವಿಚಾರಣೆಗೆ ಹಾಜರಾಗಿದ್ದರು.
ಇದೇ ಸಂದರ್ಭದಲ್ಲಿ ಸಿಂಹ ಅವರು ಹೊಂದಾಣಿಕೆ ರಾಜಕಾರಣದ ಕುರಿತು ಸಹ ಪ್ರಶ್ನೆ ಎತ್ತಿದ್ದಾರೆ, “ಹೊಂದಾಣಿಕೆ ರಾಜಕಾರಣ ಕೊನೆಯಾಗಲು ಈ ಘಟನೆ ಒಂದು ಮೇಲ್ಪಂಕ್ತಿಯಾದೀತೇ?” ಎಂದು ಕೇಳುವ ಮುಖಾಂತರ ರಾಜ್ಯ ರಾಜಕೀಯದಲ್ಲಿ ತಮ್ಮ ಪಗಡೆಯನ್ನು ಬಿಟ್ಟಿದ್ದಾರೆ.