ಕೆಐಎಡಿಬಿ ಭೂಮಿ ವಿವಾದ: ಆಪಾದನೆಗೆ ತಿರುಗೇಟು ನೀಡಿದ ಪ್ರಿಯಾಂಕ್ ಖರ್ಗೆ..!

ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (KIADB) ಮೂಲಕ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯ ಪುತ್ರ ರಾಹುಲ್ ಖರ್ಗೆಗೆ ಮೀಸಲಾದ ಭೂಮಿಯ ವಿವಾದಕ್ಕೆ ಸಂಬಂಧಿಸಿದಂತೆ, ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಬಿಜೆಪಿ ನಾಯಕ ಲಹರ್ ಸಿಂಗ್ ಉದ್ದೇಶಪೂರ್ವಕವಾಗಿ ಖರ್ಗೆ ಕುಟುಂಬದ ಮೇಲೆ ಕಳಂಕ ಹೊರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. “ಬಿಜೆಪಿ ಏನೇನು ಹೇಳಲಿ, ಆದರೆ ಅವರು ಈ ಭೂಮಿಯನ್ನು ಹೇಗೆ ಅಕ್ರಮ ಎಂದು ತೋರಿಸುತ್ತಾರೆ? ಇದು ಉದ್ಯಮಶೀಲತೆಗಾಗಿ ನೀಡಿದ ಜಾಗವಲ್ಲ, ಬದಲಿಗೆ ನಾಗರಿಕ ಸೌಕರ್ಯ (CA) ಜಾಗವಾಗಿದೆ. ಈ ಸ್ಥಳವು ಶೈಕ್ಷಣಿಕ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ, ಮತ್ತು ಈ ಟ್ರಸ್ಟ್ ಕಳೆದ 20 ವರ್ಷಗಳಿಂದ ಶೈಕ್ಷಣಿಕ ಸಂಸ್ಥೆಗಳನ್ನು ನಡಿಸುತ್ತಿದೆ,” ಎಂದು ಖರ್ಗೆ ಹೇಳಿದರು.
ಲಹರ್ ಸಿಂಗ್ ಈಗಾಗಲೇ ರಾಜಕೀಯವಾಗಿ ಮೂಲೆಗುಂಪಾಗಿದ್ದಾರೆ ಮತ್ತು ಖರ್ಗೆ ಕುಟುಂಬದ ವಿರುದ್ಧ ಆರೋಪ ಮಾಡುವ ಮೂಲಕ ಮರಳಿ ಬೆಳಕಿಗೆ ಬರಲು ಯತ್ನಿಸುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. “ಬಿಜೆಪಿ, ಅಕ್ರಮವಾಗಿ ಮಾಡಿದರೆ ಸರಿಯೆಂದು ಭಾವಿಸುತ್ತಾರೆ, ಆದರೆ ನಾವು ಕಾನೂನುಬದ್ಧವಾಗಿ ಏನೇ ಮಾಡಿದರೂ ಅವರಿಗೆ ಸಮಸ್ಯೆಯಾಗುತ್ತದೆ,” ಎಂದು ಖರ್ಗೆ ತಿರುಗೇಟು ನೀಡಿದ್ದಾರೆ.