ಹೆಚ್ಡಿಕೆ ವಿರುದ್ಧ ‘ರಾಜಭವನ ಚಲೋ’: ಕಾಂಗ್ರೆಸ್ ಪಕ್ಷದ ಹೊಸ ತಂತ್ರಕ್ಕೆ ಕಟ್ಟು ಬೀಳಲಿದ್ದಾರೆಯೇ ರಾಜ್ಯಪಾಲರು..?!
ಬೆಂಗಳೂರು: ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತು ಇತರ ಮೂವರು ಮಾಜಿ ಸಚಿವರ ವಿರುದ್ಧದ ಹಗರಣಗಳ ಕುರಿತು ರಾಜ್ಯಪಾಲರ ಗಮನಕ್ಕೆ ತರಲಾಗಿದೆ ಎನ್ನಲಾಗಿದೆ.
ಡಿ.ಕೆ.ಶಿವಕುಮಾರ್ ಹೇಳುವ ಪ್ರಕಾರ, ಲೋಕಾಯುಕ್ತ ಮತ್ತು ಎಸ್ಐಟಿ ಸೇರಿದಂತೆ ವಿವಿಧ ಇಲಾಖೆಗಳ ತನಿಖೆಯ ನಂತರ, ಕೆಲವು ನಾಯಕರ ವಿರುದ್ಧ ತನಿಖಾ ವರದಿ ಮತ್ತು ಚಾರ್ಜ್ಶೀಟ್ ದಾಖಲಿಸಲಾಗಿದೆ. ಈ ತನಿಖಾ ಸಂಸ್ಥೆಗಳು ಲೋಕಾಯುಕ್ತರಿಗೆ ಮೊಕದ್ದಮೆ ದಾಖಲಿಸಲು ಪತ್ರ ಬರೆದಿವೆ, ಆದರೆ ರಾಜ್ಯಪಾಲರು ಇನ್ನೂ ಅನುಮತಿ ನೀಡಿಲ್ಲ.
ಈ ಬಗ್ಗೆ ರಾಜ್ಯಪಾಲರ ವಿರುದ್ಧ ಒತ್ತಾಯ ಮಾಡಲು, ಆಗಸ್ಟ್ 31 ರಂದು ವಿಧಾನಸೌಧದಲ್ಲಿನ ಗಾಂಧಿ ಪ್ರತಿಮೆ ಬಳಿಯಿಂದ ರಾಜಭವನದವರೆಗೆ ‘ರಾಜಭವನ ಚಲೋ’ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ. ಇತ್ತ ಮಾದ್ಯಮಗಳು ಕೇಳಿದ ಕುಮಾರಸ್ವಾಮಿ ಅವರ ನಕಲಿ ಸಹಿಯ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ ಅವರು, “ಹೆಚ್.ಡಿ. ಕುಮಾರಸ್ವಾಮಿ ತಮ್ಮ ಸಹಿಯನ್ನು ಬೋಗಸ್ ಮಾಡಿದರೆಂದು ಹೇಳುತ್ತಿದ್ದು, ಅವರು ಇನ್ನೂ ದೂರು ನೀಡಿಲ್ಲ. ನಾನು ಅವರಿಗೆ ದೂರು ನೀಡಲು ತಕ್ಷಣವೇ ಮನವಿ ಮಾಡುತ್ತೇನೆ,” ಎಂದು ಹೇಳಿದರು.