ಬದಲಾಯಿತು ‘ಪೋರ್ಟ್ ಬ್ಲೇರ್’ ಹೆಸರು: ಅಮಿತ್ ಷಾ ಘೋಷಿಸಿದ ನೂತನ ನಾಮಧೇಯದಲ್ಲಿ ಅಡಗಿರುವ ಅರ್ಥವೇನು..?!
ನಿಕೋಬಾರ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ರಾಜಧಾನಿ ಪೋರ್ಟ್ ಬ್ಲೇರ್ಗೆ ‘ಶ್ರೀ ವಿಜಯ ಪುರ’ ಎಂಬ ಹೊಸ ಹೆಸರು ನಾಮಕರಣ ಮಾಡಲಾಗಿದೆ ಎಂದು ಘೋಷಿಸಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಯಿಂದ ದೇಶವನ್ನು ವಸಾಹತುಶಾಹಿಯ ಚಿಹ್ನೆಗಳಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಇಂದು ನಾವು ಪೋರ್ಟ್ ಬ್ಲೇರ್ಗೆ ‘ಶ್ರೀ ವಿಜಯ ಪುರ’ ಎಂದು ನಾಮಕರಣ ಮಾಡಲು ನಿರ್ಧರಿಸಿದ್ದೇವೆ. ಹಳೆಯ ಹೆಸರು ವಸಾಹತುಶಾಹಿಯ ಸಂಕೇತವಾಗಿದ್ದರೆ, ಶ್ರೀ ವಿಜಯ ಪುರವು ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಸಾಧಿಸಿದ ವಿಜಯ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಅನನ್ಯ ಪಾತ್ರವನ್ನು ಸಂಕೇತಿಸುತ್ತದೆ” ಎಂದು ಸಚಿವರು ಎಕ್ಸ್ ಪ್ಲಾಟ್ಫಾರ್ಮ್ನಲ್ಲಿ ಟ್ವೀಟ್ ಮಾಡಿದ್ದಾರೆ.
“ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ನಮ್ಮ ಸ್ವಾತಂತ್ರ್ಯ ಹೋರಾಟ ಮತ್ತು ಇತಿಹಾಸದಲ್ಲಿ ಅಸಾಧಾರಣ ಸ್ಥಾನವನ್ನು ಹೊಂದಿವೆ. ಒಂದು ಕಾಲದಲ್ಲಿ ಚೋಳ ಸಾಮ್ರಾಜ್ಯದ ನೌಕಾ ತಾಣವಾಗಿ ಕಾರ್ಯ ನಿರ್ವಹಿಸಿದ ದ್ವೀಪ ಪ್ರದೇಶವು ಇಂದು ನಮ್ಮ ಸಾಮರಸ್ಯ ಮತ್ತು ಅಭಿವೃದ್ಧಿ ಆಕಾಂಕ್ಷೆಗಳಿಗೆ ಪ್ರಮುಖ ತಾಣವಾಗಿದೆ” ಎಂದು ಅವರು ಹೇಳಿದ್ದಾರೆ.
“ಇದು ನಮ್ಮ ರಾಷ್ಟ್ರಧ್ವಜವನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಮೊದಲು ಹಾರಿಸಿದ ಸ್ಥಳವಾಗಿದೆ ಮತ್ತು ವೀರ್ ಸಾವರ್ಕರ್ ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರು ಸ್ವತಂತ್ರ ರಾಷ್ಟ್ರಕ್ಕಾಗಿ ಹೋರಾಡಿದ ಜೈಲು ಕೂಡ ಇದೇ ಸ್ಥಳದಲ್ಲಿದೆ” ಎಂದು ಶಾ ಹೇಳಿದ್ದಾರೆ.