ಅಬಕಾರಿ ಸಚಿವ ತಿಮ್ಮಾಪುರ ಮೇಲೆ ಭೂಮಿ ಕಬಳಿಕೆ ಆರೋಪ: ರಾಜ್ಯದಲ್ಲಿ ಯಾವುದಿದು ಹೊಸ ಹಗರಣ?!
ರಾಯಚೂರು: ಜಿಲ್ಲೆಯ ಚಿಕ್ಕ ಉಪ್ಪೇರಿ ಗ್ರಾಮದಲ್ಲಿ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡ ಆರೋಪ ಸಚಿವ ಆರ್.ಬಿ. ತಿಮ್ಮಾಪುರ ಅವರ ಆರ್.ಬಿ ಶುಗರ್ಸ್ ಕಂಪನಿಯ ಮೇಲೆ ಕೇಳಿಬಂದಿದೆ. ರೈತ ಸಂಘದ ಆರೋಪದ ಪ್ರಕಾರ, ಕಂಪನಿ ಸುಣಕಲ್ ಸಿಮಾಂತರದಲ್ಲಿರುವ ಸರ್ವೆ ನಂ62ರ ಗೈರಾಣಿ ಜಮೀನನ್ನು ಅಕ್ರಮವಾಗಿ ವಶಪಡಿಸಿಕೊಂಡಿದೆ. ಈ ಭೂಮಿಯನ್ನು ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಬಳಸಿಕೊಳ್ಳುವ ಯೋಜನೆ ಇದೆ ಎಂಬ ವದಂತಿ ಹಬ್ಬಿದೆ.
ರೈತರ ಆತಂಕ:
ಈ ಭೂಮಿ ಜಾನುವಾರುಗಳ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದರಿಂದ, ಕಾರ್ಖಾನೆ ನಿರ್ಮಾಣದಿಂದ ಸುತ್ತಮುತ್ತಲಿನ ಗ್ರಾಮಗಳಿಗೆ ಪರಿಸರ ಮಾಲಿನ್ಯ, ಕೃಷ್ಣ ನದಿಗೆ ಕಲುಷಿತ ತ್ಯಾಜ್ಯ ಹರಿಯುವ ಸಾಧ್ಯತೆ ಇದೆ. ಇದರಿಂದ ರೈತರ ಬೆಳೆ ಮತ್ತು ಜಾನುವಾರುಗಳಿಗೆ ತೊಂದರೆಯಾಗಲಿದೆ ಎಂದು ರೈತ ಸಂಘ ಆತಂಕ ವ್ಯಕ್ತಪಡಿಸಿದೆ.
ಅರಣ್ಯ ಮತ್ತು ಕಂದಾಯ ಇಲಾಖೆಯ ಭೂಮಿ ಕೂಡ ಕಬಳಿಕೆ ಆರೋಪ:
ಇದಲ್ಲದೆ, ಕಂಪನಿ ಕಂದಾಯ ಇಲಾಖೆಯ 49 ಎಕರೆ ಮತ್ತು ಅರಣ್ಯ ಇಲಾಖೆಯ 43 ಎಕರೆ ಭೂಮಿಯನ್ನು ಕೂಡ ಕಬಳಿಸಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ರೈತರ ಒತ್ತಾಯ:
ರೈತ ಸಂಘವು ಸರ್ಕಾರಿ ಭೂಮಿಯನ್ನು ರಕ್ಷಿಸಿ ದನಕರುಗಳಿಗೆ ಮೀಸಲಿಡಬೇಕು ಮತ್ತು ಚಿಕ್ಕ ಉಪ್ಪೇರಿ ಗ್ರಾಮದ ಮಧ್ಯದಲ್ಲಿ ನಿರ್ಮಿಸಲು ಯೋಜಿಸಿರುವ 50 ಫೀಟ್ ರಸ್ತೆಯನ್ನು ತಡೆಯಬೇಕು ಎಂದು ಒತ್ತಾಯಿಸಿದೆ.
ಸಚಿವ ಆರ್.ಬಿ. ತಿಮ್ಮಾಪುರ ಅವರ ಆರ್.ಬಿ ಶುಗರ್ಸ್ ಕಂಪನಿ ವಿರುದ್ಧ ಸರ್ಕಾರಿ ಭೂಮಿ ಕಬಳಿಕೆ ಆರೋಪ ಕೇಳಿಬಂದಿದೆ. ಈ ಆರೋಪದಿಂದಾಗಿ ಸುತ್ತಮುತ್ತಲಿನ ಗ್ರಾಮಗಳ ಜನರು ಮತ್ತು ರೈತರು ಆತಂಕಕ್ಕೀಡಾಗಿದ್ದಾರೆ. ಮುಂದೆ ಈ ಆರೋಪ ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂದು ಕಾದು ನೋಡಬೇಕಿದೆ.