“ನಾನು ಕಲಾವಿದೆ ಅಲ್ಲ, ನಾನು ಬಿಜೆಪಿ ಕಾರ್ಯಕರ್ತೆ!”: ಕಂಗನಾ ರಾಣಾವತ್ ಹೇಳಿಕೆ ಹಿಂಪಡೆದಿದ್ದು ಯಾಕೆ..?!
ನವದೆಹಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದೆಯಾಗಿರುವ ನಟಿ ಕಂಗನಾ ರಣೌತ್ ಇತ್ತೀಚೆಗೆ ತಾನು ನೀಡಿದ್ದ ರೈತ ಕಾನೂನು ಕುರಿತ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮದಲ್ಲಿ ನೀಡಿದ ತಮ್ಮ ಹೇಳಿಕೆಯಿಂದ ಅಸಮಾಧಾನಗೊಂಡ ಜನತೆಗೆ ಅವರು ಕ್ಷಮೆ ಕೇಳಿದ್ದಾರೆ.
“ಇತ್ತೀಚಿನ ದಿನಗಳಲ್ಲಿ ಮಾಧ್ಯಮದವರು ನನ್ನ ಬಳಿ ರೈತ ಕಾನೂನಿನ ಕುರಿತು ಪ್ರಶ್ನೆಗಳನ್ನು ಕೇಳಿದರು. ಆ ವೇಳೆ ನಾನು ರೈತರು ಪ್ರಧಾನಮಂತ್ರಿ ಮೋದಿಗೆ ಕಾನೂನನ್ನು ಹಿಂದಿರುಗಿಸಲು ವಿನಂತಿಸಬೇಕು ಎಂದು ಸೂಚಿಸಿದೆ. ಆದರೆ, ನನ್ನ ಈ ಹೇಳಿಕೆಯಿಂದ ಹಲವು ಜನ ಅಸಮಾಧಾನಗೊಂಡಿದ್ದಾರೆ,” ಎಂದು ಕಂಗನಾ ಹೇಳಿದ್ದಾರೆ.
“ರೈತ ಕಾನೂನನ್ನು ಜಾರಿಗೆ ತರುವ ವೇಳೆ ನಾವು ಅದಕ್ಕೆ ಬೆಂಬಲ ನೀಡಿದ್ದೇವೆ. ಆದರೆ, ನಮ್ಮ ಪ್ರಧಾನಮಂತ್ರಿಯವರ ಸೂಕ್ಷ್ಮತೆ ಹಾಗೂ ಸಾಂವಿಧಾನಿಕ ಹೊಣೆಗಾರಿಕೆಯನ್ನು ಮನಗಂಡು ಅವರು ಕಾನೂನನ್ನು ಹಿಂಪಡೆದಿದ್ದಾರೆ. ಅವರ ಮಾತುಗಳ ಗೌರವವನ್ನು ಕಾಪಾಡುವುದು ನಮಗೆಲ್ಲಾ ಕಾರ್ಯಕರ್ತರ ಕರ್ತವ್ಯವಾಗಿದೆ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
“ನಾನು ಕಲಾವಿದೆ ಅಲ್ಲ. ನಾನು ಭಾರತೀಯ ಜನತಾ ಪಕ್ಷದ ಕಾರ್ಯಕರ್ತೆ. ಆದ್ದರಿಂದ, ನನ್ನ ಅಭಿಪ್ರಾಯಗಳು ಪಕ್ಷದ ನಿಲುವನ್ನು ಪ್ರತಿಬಿಂಬಿಸಬೇಕು. ನನ್ನ ವೈಯಕ್ತಿಕ ಅಭಿಪ್ರಾಯಗಳಿಗೆ ಅವಕಾಶವಿಲ್ಲ,” ಎಂದು ಹೇಳಿಕೆ ನೀಡಿದ ಅವರು, ತಮ್ಮ ಹೇಳಿಕೆಯಿಂದ ಯಾರಾದರೂ ನಿರಾಸೆಗೊಳಗಾದರೆ, ಕ್ಷಮೆ ಕೋರಿದ್ದು, ತಮ್ಮ ಮಾತುಗಳನ್ನು ಹಿಂತೆಗೆದುಕೊಂಡಿದ್ದಾರೆ.