‘ವೆನಮ್: ದಿ ಲಾಸ್ಟ್ ಡ್ಯಾನ್ಸ್’: ಬಿಡುಗಡೆಗೂ ಮುನ್ನವೇ ದಾಖಲೆ ಬರೆದ ಹಾಲಿವುಡ್‌ನ ಹೊಸ ಚಿತ್ರ..!
ಬೆಂಗಳೂರು: ಹಾಲಿವುಡ್ ಬ್ಲಾಕ್‌ಬಸ್ಟರ್ ಫ್ರಾಂಚೈಸ್ ವೆನಮ್ ಈಗ ಹೊಸ ತಿರುವು ಪಡೆದುಕೊಂಡಿದ್ದು, ಅಂತಿಮ ಚಿತ್ರ ‘ವೆನಮ್: ದಿ ಲಾಸ್ಟ್ ಡ್ಯಾನ್ಸ್’ ಸ್ಕ್ರೀನ್ ಮೇಲೆ ಬಂದಿದ್ದು ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಈ ಹಿಂದೆ ಬಿಡುಗಡೆಯಾದ ‘ವೆನಮ್’ ಹಾಗೂ ‘ವೆನಮ್ 2’ ಚಿತ್ರಗಳು ಪ್ರೇಕ್ಷಕರ ಹೃದಯ ಗೆದ್ದಿದ್ದು, ಇದೀಗ ಎಡ್ಡಿ ಬ್ರಾಕ್ ಮತ್ತು ವೆನಮ್ ಪಾತ್ರಗಳು ತಮ್ಮ ಕೊನೆಯ ಹಂತವನ್ನು ಹೇಗೆ ಮುಕ್ತಾಯಗೊಳ್ಳಿಸುತ್ತವೆ ಎಂಬುದನ್ನು ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ.
ಮುಂಗಡ ಟಿಕೆಟ್ ಬುಕ್ಕಿಂಗ್ ಮೂಲಕವೇ ದಾಖಲೆ ಬರೆದ ಈ ಸಿನಿಮಾ ಪ್ರೀಮಿಯರ್‌ನಲ್ಲಿ ಭರ್ಜರಿ ಮೆಚ್ಚುಗೆ ಪಡೆದಿದ್ದು, ಕೇವಲ ಚಿತ್ರವಿಮರ್ಶಕರಿಂದ ಮಾತ್ರವಲ್ಲದೆ ಅಭಿಮಾನಿಗಳಿಂದಲೂ ಸಾಕಷ್ಟು ಪ್ರಶಂಸೆ ಗಳಿಸಿದೆ. ಪ್ರಬಲ ತಾರಾಗಣ, ಆಕರ್ಷಕ ಪಾತ್ರಗಳು ಮತ್ತು ರೋಚಕ ಕಥಾಹಂದರವು ಪ್ರೇಕ್ಷಕರನ್ನು ಮೊದಲ ದೃಶ್ಯದಿಂದಲೇ ಹಿಡಿದಿಟ್ಟುಕೊಳ್ಳುತ್ತಿದೆ.
ಟಾಮ್ ಹಾರ್ಡಿ ತನ್ನ ಅಪ್ರತಿಮ ಅಭಿನಯದ ಮೂಲಕ ಮತ್ತೊಮ್ಮೆ ವೆನಮ್ ಪಾತ್ರಕ್ಕೆ ಜೀವ ತುಂಬಿದ್ದು, ಚಿವೆಟೆಲ್ ಎಜಿಯೋಫೋರ್, ಜುನೋ ಟೆಂಪಲ್, ರೈಸ್ ಇಫಾನ್ಸ್ ಮುಂತಾದ ತಾರೆಗಳು ಅವರೊಂದಿಗೆ ಸೇರಿರುವುದು ಸಿನೆಮಾದ ಮತ್ತೊಂದು ಮೆರುಗು. ಹಾರ್ಡಿ ಮತ್ತು ಮಾರ್ಸೆಲ್ ಅವರ ಕಥಾಹಂದರವನ್ನು ಆಧರಿಸಿ, ನಿರ್ದೇಶಕಿ ಕೆಲ್ಲಿ ಮಾರ್ಸೆಲ್ ಸಿನಿಮಾವನ್ನು ಪರದೆಗೆ ತಂದಿರುವುದು ಚಿತ್ರಕ್ಕೆ ಹೊಸ ಆಯಾಮ ನೀಡಿದೆ.
ವಿವಿಧ ಭಾಷೆಗಳಲ್ಲಿ ಬಿಡುಗಡೆ:
ಸೋನಿ ಪಿಕ್ಚರ್ಸ್ ಎಂಟರ್‌ಟೈನ್‌ಮೆಂಟ್ ಇಂಡಿಯಾ, ವೆನಮ್: ದಿ ಲಾಸ್ಟ್ ಡ್ಯಾನ್ಸ್ ಅನ್ನು ಇಂಗ್ಲಿಷ್, ಹಿಂದಿ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ 3D ಮತ್ತು IMAX 3D ನಲ್ಲಿ ಬಿಡುಗಡೆ ಮಾಡಿದೆ. ಭಾರತೀಯ ಪ್ರೇಕ್ಷಕರಿಗೂ ಸೂಕ್ತ ಪ್ಯಾಕೇಜ್ ಅನ್ನು ನೀಡಿದ್ದು, ದೇಶಾದ್ಯಂತ ಹಾಲಿವುಡ್ ಸಿನೆಮಾ ಅಭಿಮಾನಿಗಳಿಗೆ ಈ ಸಿನಿಮಾ ವಿಶೇಷ ಅನುಭವ ನೀಡಲಿದೆ.