ಬೆಳಗಾವಿ: ಇಂದು ಸುವರ್ಣ ಸೌಧದಲ್ಲಿ ನಡೆದ ಘಟನೆ ರಾಜಕೀಯ ವಲಯದಲ್ಲಿ ಹೈಡ್ರಾಮಾಕ್ಕೆ ಕಾರಣವಾಯಿತು. ವಿಧಾನ ಪರಿಷತ್ ಅಧಿವೇಶನದ ವೇಳೆ ಬಿಜೆಪಿ ನಾಯಕ ಸಿ.ಟಿ. ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮೇಲೆ ಅವಹೇಳನಕಾರಿ ಪದ ಬಳಸಿದರೆಂಬ ಆರೋಪದ ಬೆನ್ನಲ್ಲೇ, ಹೆಬ್ಬಾಳ್ಕರ್ ಬೆಂಬಲಿಗರು ಸುವರ್ಣ ಸೌಧದೊಳಗೆ ನುಗ್ಗಿ, ಸಿ.ಟಿ. ರವಿ ಮೇಲೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.
ಘಟನೆಯು ಸುವರ್ಣ ಸೌಧದ ಭದ್ರತೆ ಕುರಿತು ಪ್ರಶ್ನೆ ಕೇಳಿ ಬಂದಿದೆ. ಈ ವೇಳೆ, ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆಪ್ತ ಸಹಾಯಕರು ಮತ್ತು ಬೆಂಬಲಿಗರು ಸಿ.ಟಿ. ರವಿ ಅವರ ಮೇಲೆ ದೌರ್ಜನ್ಯ ಎಸಗಿದರು ಎಂದು ಆರೋಪಿಸಲಾಗಿದೆ.
ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಮಧ್ಯ ಪ್ರವೇಶಿಸಿದ್ದರಿಂದ ರವಿ ಅವರು ಹಲ್ಲೆಯಿಂದ ತಪ್ಪಿಸಿಕೊಂಡ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಮಧ್ಯೆ, ಸ್ಥಳದಲ್ಲಿ ಪರಿಸ್ಥಿತಿ ಗಂಭೀರಗೊಂಡಿದ್ದು, ಪ್ರತಿಭಟನೆ ಮತ್ತು ಗದ್ದಲ ಜೋರಾಗಿದೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಿ.ಟಿ. ರವಿ ವಿರುದ್ಧ ಸಭಾಪತಿ ಕಚೇರಿಯಲ್ಲಿ ದೂರು ದಾಖಲಿಸಿದ್ದು, ರವಿ ಅವರ ಆಕ್ಷೇಪಾರ್ಹ ಪದ ಬಳಕೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಸುವರ್ಣ ಸೌಧದ ಒಳಾಂಗಣದಲ್ಲಿ ಭದ್ರತೆಯಲ್ಲಿ ಕಂಡುಬಂದ ಲೋಪಗಳು ಸಾರ್ವಜನಿಕ ಮತ್ತು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದೀಗ ಸಭಾಪತಿ, ಸಿ.ಟಿ. ರವಿ ಅವರ ಮಾತುಗಳ ಪರಿಶೀಲನೆಗೆ ಆಡಿಯೋ-ವೀಡಿಯೋ ದೃಶ್ಯವನ್ನು ಪರಿಶೀಲಿಸಲು ನಿರ್ದೇಶನ ನೀಡಿದ್ದು, ಹೆಚ್ಚಿನ ತನಿಖೆಗಾಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಘಟನೆಯು ರಾಜ್ಯ ರಾಜಕೀಯದಲ್ಲಿ ಹೊಸ ತಿರುವು ನೀಡಿದ್ದು, ಸಂಬಂಧಪಟ್ಟ ಎಲ್ಲಾ ಪಕ್ಷಗಳ ಪ್ರತಿಕ್ರಿಯೆಗಳನ್ನು ಆಹ್ವಾನಿಸಿದೆ.