ಬಿಗ್ ಬಾಸ್ ಕನ್ನಡ ಕಾನೂನು ಬಾಹಿರವೇ ..?! ಶೋ ಸ್ಥಗಿತಗೊಳಿಸಲು ಜಿಲ್ಲಾಧಿಕಾರಿ ಸೂಚನೆ..?!
ನೆಲಮಂಗಲ: ರಾಜ್ಯದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ತನ್ನ ಫೈನಲ್ ಘಟ್ಟದಲ್ಲಿ ರೋಚಕತೆ ಹೆಚ್ಚಿಸುತ್ತಿದ್ದರೂ, ಈಗ ಭಾರೀ ಕಾನೂನಾತ್ಮಕ ಸಂಕಷ್ಟಕ್ಕೆ ಸಿಲುಕಿದೆ. ಬೆಂಗಳೂರು ದಕ್ಷಿಣ ತಾಲೂಕಿನ ಮಾಳಿಗೊಂಡನಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಶೋ ಕಾನೂನಾತ್ಮಕ ನಿಯಮಗಳನ್ನು ಉಲ್ಲಂಘಿಸಿರುವ ಕುರಿತು ಹಲವಾರು ದೂರುಗಳು ಕೇಳಿಬಂದಿವೆ.
ಅನುಮತಿ ಇಲ್ಲದೆ ಶೋ ನಡೆಸುವ ಆರೋಪ:
ರಿಯಾಲಿಟಿ ಶೋ ಕಾರ್ಮಿಕ ಇಲಾಖೆ, ಸ್ಥಳೀಯ ಗ್ರಾಮ ಪಂಚಾಯಿತಿ, ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅಗತ್ಯ ಅನುಮತಿಗಳನ್ನು ಪಡೆಯದೆ ನಡೆಸಲಾಗುತ್ತಿದೆ ಎಂದು ರಾಘವೇಂದ್ರ ಆಚಾರ್ ಮತ್ತು ಭಾನುಪ್ರಕಾಶ್ ಅವರು ದೂರು ನೀಡಿದ್ದಾರೆ. ಭೂಪರಿವರ್ತನೆ ಆದೇಶ ಮತ್ತು ಲೈಸೆನ್ಸ್ ರದ್ದು ಮಾಡಿರುವ ಜಿಲ್ಲಾಧಿಕಾರಿಗಳು ಶೋ ಸ್ಥಗಿತಗೊಳಿಸಲು ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ತ್ವರಿತ ಕ್ರಮ:
ಜಿ.ಪಂ. ಸಿಇಒ ಲತಾ ಕುಮಾರಿ ಅವರು ಶೋಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ನಿಯಮಾನುಸಾರ ತಕ್ಷಣದ ಕ್ರಮ ಕೈಗೊಳ್ಳಲು ರಾಮೋಹಳ್ಳಿ ಪಿಡಿಒ ಗೆ ಆದೇಶ ನೀಡಿದ್ದಾರೆ. ಈ ವೇಳೆ ಶೋ ನಡೆಯುತ್ತಿರುವ ಸರ್ವೆ ನಂ.128/1 ಜಮೀನಿಗೆ ನೀಡಿದ್ದ ವಾಣಿಜ್ಯ ವ್ಯವಹಾರದ ಲೈಸೆನ್ಸ್ ಕೂಡ ರದ್ದು ಮಾಡಲಾಗಿದೆ.
ಸಾಮಾಜಿಕ ಹೋರಾಟದ ಎಚ್ಚರಿಕೆ:
ಪ್ರೆಸ್ ಕ್ಲಬ್ ಕೌನ್ಸಿಲ್ ರಾಜ್ಯಾಧ್ಯಕ್ಷ ರಾಘವೇಂದ್ರ ಆಚಾರ್ ಹೇಳಿದ್ದೇನು?
“ಎಲ್ಲರಿಗೂ ಒಂದೇ ಕಾನೂನು ಅನ್ವಯಿಸುತ್ತದೆ. ಬಿಗ್ಬಾಸ್ ಶೋ ಕಾನೂನು ಬಾಹಿರವಾಗಿ ನಡೆಯುತ್ತಿದ್ದರೆ, ನಾವು ಹೋರಾಟ ನಡೆಸಲು ಸಿದ್ಧ.”
ಇನ್ನೊಬ್ಬ ದೂರುದಾರ ಭಾನುಪ್ರಕಾಶ್ ಕೂಡ ಆರೋಪಿಸಿದ್ದಾರೆ:
“ಕಾನೂನು ಪಾಲನೆ ಮಾಡದೇ ಶೋ ನಡೆಸುವುದು ಜನರಲ್ಲಿ ಅಪನಂಬಿಕೆ ಮೂಡಿಸುತ್ತದೆ. ತಕ್ಷಣವೇ ಶೋ ಸ್ಥಗಿತಗೊಳಿಸಬೇಕು.”
ಬಿಗ್ ಬಾಸ್ ಕನ್ನಡದ ಭವಿಷ್ಯ ಏನು?
ಈ ಘಟನೆಗಳಿಂದ ಫೈನಲ್ ಎಪಿಸೋಡ್ ಸ್ಥಗಿತಗೊಳ್ಳುತ್ತದೆಯೆ? ಎಂಬ ಪ್ರಶ್ನೆ ಉಂಟಾಗಿದೆ. ಇಂತಹ ದೊಡ್ಡ ರಿಯಾಲಿಟಿ ಶೋ ಕಾನೂನಾತ್ಮಕ ಬಿಕ್ಕಟ್ಟಿಗೆ ಸಿಲುಕಿರುವುದು ಪ್ರೇಕ್ಷಕರ ನಡುವೆ ಚರ್ಚೆ ಹೆಚ್ಚಿಸಿದೆ.