ಉತ್ತರ ಕನ್ನಡದಲ್ಲಿ ಮಾಲೀಕನನ್ನು ಕಳೆದುಕೊಂಡು ತಬ್ಬಲಿಯಾದ ಶ್ವಾನ!
ಉತ್ತರ ಕನ್ನಡ: ನಿಯತ್ತು ಮತ್ತು ನಾಯಿಗೆ ಯಾಕೆ ಅಷ್ಟು ಹೋಲಿಕೆ ಮಾಡುತ್ತಾರೆ ಎಂಬುದಕ್ಕೆ ಸಾಕ್ಷಿ ಇಲ್ಲಿದೆ. ಗುಡ್ಡ ಕುಸಿತಕ್ಕೆ ಸಿಲುಕಿ ಜಲ ಸಮಾಧಿಯಾದ ಮಾಲಿಕನನ್ನು ಈ ಶ್ವಾನ ಹುಡುಕುತ್ತಾ ಇರುವ ಪರಿ ನೋಡಿದರೆ ಯಾರಿಗಾದರೂ ಕರುಳು ಹಿಂಡುವುದಂತು ನಿಜ. ರಾಜ್ಯದಲ್ಲಿ ಧಾರಾಕಾರವಾಗಿ ನಡೆಯುತ್ತಿರುವ ಮಳೆ ಅನೇಕ ಕಡೆ ಗುಡ್ಡ ಕುಸಿತ ಹಾಗೂ ಪ್ರವಾಹವನ್ನು ಸೃಷ್ಟಿಸಿದೆ. ನಿನ್ನೆ ಮಂಗಳವಾರ, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗ್ರಾಮದ ಮೂಲಕ ಹಾದು ಹೋಗುವ, ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುಡ್ಡ ಕುಸಿದು ಸರಿಸುಮಾರು 8 ರಿಂದ 10 ಜನರು ಪಕ್ಕದಲ್ಲೇ ಹರಿಯುತ್ತಿದ್ದ ಗಂಗಾವಳಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. 4 ಮೃತರ ದೇಹ ಸಿಕ್ಕಿದೆ ಎನ್ನಲಾಗಿದೆ.
ಒಂದೇ ಕುಟುಂಬದ ನಾಲ್ವರ ಸಾವು. ಶಿರೂರು ಗ್ರಾಮದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿ ಡಾಬಾ ನಡೆಸುತ್ತಿದ್ದ, ಲಕ್ಷ್ಮಣ ನಾಯ್ಕ, ಅವರ ಪತ್ನಿ, ಪುತ್ರ ಹಾಗೂ ಪುತ್ರಿ ಗುಡ್ಡ ಕುಸಿತಕ್ಕೆ ಎಲ್ಲರೂ ಒಂದೇ ಸಲ ಜಲ ಸಮಾಧಿ ಆಗಿದ್ದಾರೆ. ಇವರು ಸಾಕಿದ ನಾಯಿ ಈಗ ಮನೆಯವರನ್ನು ಕಳೆದುಕೊಂಡು ಅನಾಥವಾಗಿದೆ. ಮನೆಯ ಅವಶೇಷಗಳು ಮಣ್ಣಿನ ಅಡಿಯಾಗಿದೆ. ಆ ಸುತ್ತಲೂ ನಾಯಿ ಮೂಸುತ್ತಾ, ಕಣ್ಣೀರು ಸುರಿಸುತ್ತ, ಹಸಿದರೂ ಜಾಗ ಬಿಡದೆ ಮಾಲಿಕನಿಗಾಗಿ ಕಾಯುತ್ತಿದೆ. ಇದನ್ನು ಕಂಡ ಸ್ಥಳಿಯರಿಗು ಕೂಡ ದುಃಖ ತಂದಿದೆ.