ಶ್ರೀ ಸಂಗಮೇಶ್ವರ ಮಹಾರಾಜರ ಜೀವನಾಧಾರಿತ ಚಿತ್ರ: ಸಿಕ್ಕಿತು ಧರ್ಮಸ್ಥಳದ ಧರ್ಮಾಧಿಕಾರಿಗಳ ಆಶೀರ್ವಾದ..!
ಧರ್ಮಸ್ಥಳ: ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀವೀರೇಂದ್ರ ಹೆಗಡೆ ಅವರು ಇತ್ತೀಚೆಗೆ ಶ್ರೀ ಸಂಗಮೇಶ್ವರ ಮಹಾರಾಜರ ಜೀವನಾಧಾರಿತ ಚಿತ್ರ “ಸಮರ್ಥ ಸದ್ಗುರು ಶ್ರೀ ಸಂಗಮೇಶ್ವರ ಮಹಾರಾಜರು” ಚಿತ್ರದ ಲಿರಿಕಲ್ ವಿಡಿಯೋ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಜಮಖಂಡಿ ತಾಲ್ಲೂಕಿನ ಇಂಚಗೇರಿ ಮಠದ ಕಲ್ಪತರುವಾದ ಶ್ರೀಸಂಗಮೇಶ್ವರ ಮಹಾರಾಜರ ಜೀವನ ಚರಿತ್ರವನ್ನು ಆಧರಿಸಿ ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ಚಿತ್ರದಲ್ಲಿ ಶ್ರೀ ಸಂಗಮೇಶ್ವರರ ಪಾತ್ರವನ್ನು ನೂತನ ಪ್ರತಿಭೆ ರವಿ ನಾರಾಯಣ್ ನಿರ್ವಹಿಸುತ್ತಿದ್ದಾರೆ. ಹಿರಿಯ ಕಲಾವಿದರಾದ ರಾಮಕೃಷ್ಣ, ವಿಜಯಕಾಶಿ, ವಿನಯಪ್ರಸಾದ್ ಮುಂತಾದವರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಚಿತ್ರದ ಹಾಡುಗಳು ತುಂಬಾ ಭಕ್ತಿಪರವಾಗಿದ್ದು, ವಿಶೇಷವಾಗಿ ಗಾಯಕ ರವೀಂದ್ರ ಸೊರಗಾವಿ ಅವರು ಹಾಡಿದ “ಇಂಚಗೇರಿ ಆಧ್ಯಾತ್ಮಿಕ ಸಂಪ್ರದಾಯ ಗುರುಲಿಂಗ ಜಂಗಮ ಮಹಾರಾಜ” ಹಾಡು ಬಹಳ ಜನಪ್ರಿಯವಾಗಿದೆ.
ಧರ್ಮಸ್ಥಳಕ್ಕೆ ಭೇಟಿ ನೀಡಿದ ಚಿತ್ರತಂಡದ ಸದಸ್ಯರು ಶ್ರೀಮಂಜುನಾಥಸ್ವಾಮಿ ದರ್ಶನ ಪಡೆದುಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀವೀರೇಂದ್ರ ಹೆಗಡೆ ಅವರು, ಚಿತ್ರವು ಇಂಚಗೇರಿ ಆಧ್ಯಾತ್ಮಿಕ ಸಂಪ್ರದಾಯವನ್ನು ಜನರಿಗೆ ಪರಿಚಯಿಸುವಲ್ಲಿ ಒಂದು ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದರು.