ಬೆಂಗಳೂರು ನಗರಕ್ಕೆ ಹೊಸ ಆಶ್ರಯ: ಅನಾಥ ಬೆಕ್ಕುಗಳಿಗೆ ಪ್ರೀತಿಯ ತಾಣ!

ಬೆಂಗಳೂರು ನಗರದ ಅನಾಥ ಬೆಕ್ಕುಗಳ ಪಾಲಿಗೆ ಒಂದು ಮಹತ್ತರವಾದ ಕ್ಷಣ! ಟೆಕಿಯಾನ್ ಮತ್ತು ಪ್ರಾಣಾ ಅನಿಮಲ್ ಫೌಂಡೇಶನ್ ಒಡಗೂಡಿ ಅನಾಥ ಬೆಕ್ಕುಗಳ ಆಶ್ರಯ ಮತ್ತು ದತ್ತು ಕೇಂದ್ರ ಆರಂಭಿಸಿದ್ದು, ಇದು ಭಾರತದ ಬೆಕ್ಕುಗಳಿಗಾಗಿ ಮೊದಲನೇಯ ಕೇಂದ್ರವಾಗಲಿದೆ.
ಅನಾಥ ಬೆಕ್ಕುಗಳಿಗೆ ಹೊಸ ಬದುಕಿನ ಬೆಳಕು!
ಬೆಂಗಳೂರು ಕನಕಪುರ ರಸ್ತೆಯಲ್ಲಿ ಆರಂಭಗೊಂಡಿರುವ ಈ ಕೇಂದ್ರದಲ್ಲಿ ಗಾಯಗೊಂಡ, ತ್ಯಜಿಸಲ್ಪಟ್ಟ ಮತ್ತು ದಿಕ್ಕು ತಪ್ಪಿದ ಬೆಕ್ಕುಗಳು ಆಶ್ರಯ ಪಡೆಯಲಿವೆ. ಶಸ್ತ್ರಚಿಕಿತ್ಸೆಯ ನಂತರದ ಆರೈಕೆ, ಆರೋಗ್ಯಪೂರಿತ ಆಹಾರ, ಚಿಕಿತ್ಸೆ, ಮತ್ತು ಸ್ಥಿರ ಮನೆ ಹುಡುಕುವ ದತ್ತು ಕ್ರಿಯೆಗಳನ್ನು ಇಲ್ಲಿ ಒದಗಿಸಲಾಗುತ್ತದೆ.
ಟೆಕಿಯಾನ್ ಹಾಗೂ ಪ್ರಾಣಾ ಫೌಂಡೇಶನ್ ಹೊಸ ಹೆಜ್ಜೆ
ಟೆಕಿಯಾನ್‌ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ರಾಣಾ ರಾಬಿಲಾರ್ಡ್ ಮಾತನಾಡುತ್ತಾ,
“ಬೆಂಗಳೂರು ನಗರದಲ್ಲಿ ಬೆಕ್ಕುಗಳ ಜೀವನ ಉತ್ತಮಗೊಳ್ಳಲು ನಮ್ಮ ಈ ಹೊಸ ಪ್ರಯತ್ನ. ಪ್ರಾಣಾ ಫೌಂಡೇಶನ್ ಜೊತೆಗೂಡಿ ಈ ಕಾರ್ಯ ನಡೆಸುವುದರಿಂದ, ಸಾಕುಪ್ರಾಣಿಗಳ ಜವಾಬ್ದಾರಿಯುತ ಮಾಲೀಕತ್ವ ಮತ್ತು ಪ್ರಾಣಿ ಕಲ್ಯಾಣದ ಬಗ್ಗೆ ಜಾಗೃತಿ ಮೂಡಿಸುವುದಕ್ಕೂ ಸಹಾಯವಾಗಲಿದೆ” ಎಂದರು.
ಈ ಸಹಯೋಗವು ಈಗಾಗಲೇ ತುರ್ತು 24/7 ಪ್ರಾಣಿ ಆಂಬ್ಯುಲೆನ್ಸ್ ಸೇವೆಯ ಯಶಸ್ವಿ ಪ್ರಾರಂಭದ ನಂತರ, ಟೆಕಿಯಾನ್ ಮತ್ತು ಪ್ರಾಣಾ ನಡುವಿನ ಮೂರನೇ ಮಹತ್ವದ ಯೋಜನೆಯಾಗಿದೆ.
ನಟಿ ಸಂಯುಕ್ತಾ ಹೊರ್ನಾಡ್ ಹರ್ಷ!
ಪ್ರಾಣಾ ಅನಿಮಲ್ ಫೌಂಡೇಶನ್‌ನ ಸಂಸ್ಥಾಪಕಿ ನಟಿ ಸಂಯುಕ್ತಾ ಹೊರ್ನಾಡ್ ಈ ಕಾರ್ಯವನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿ,
“ಇದು ನನ್ನ ಕನಸು ನನಸಾದ ಕ್ಷಣ! ಅನಾಥ ಬೆಕ್ಕುಗಳ ರಕ್ಷಣೆ ಮಾಡುವ ನಮ್ಮ ಸ್ವಯಂ ಸೇವಕರಿಗೆ ಸಹಾಯ ಮಾಡಲು ಮತ್ತು ಬೆಕ್ಕುಗಳಿಗೆ ಪ್ರೀತಿಯ ಮನೆ ಒದಗಿಸಲು ಇದು ದೊಡ್ಡ ಮೆಟ್ಟಿಲು. ಟೆಕಿಯಾನ್ ಸಹಕಾರದಿಂದ ಈ ಕಾರ್ಯಾಚರಣೆ ಸಾಧ್ಯವಾಗಿದೆ, ಮುಂದೆ ಇನ್ನಷ್ಟು ಸಹಯೋಗಗಳ ನಿರೀಕ್ಷೆಯಲ್ಲಿದ್ದೇವೆ” ಎಂದರು.
ಕಲಾಕಾರರ ಸಹಾಯ: ವಿಶೇಷ ಭಿತ್ತಿಚಿತ್ರಗಳು
ಈ ಕೇಂದ್ರದ ಇನ್ನೊಂದು ವಿಶೇಷ ಅಂಶವೆಂದರೆ, ಕರ್ನಾಟಕ ಚಿತ್ರಕಲಾ ಪರಿಷತ್ತು ಮತ್ತು ಸ್ಥಳೀಯ ಕಲಾ ಕಾಲೇಜುಗಳ ವಿದ್ಯಾರ್ಥಿಗಳು ಬೆಕ್ಕುಗಳ ಸೌಂದರ್ಯವನ್ನು ಪ್ರತಿಬಿಂಬಿಸುವ ಅದ್ಭುತ ಭಿತ್ತಿಚಿತ್ರಗಳು ರಚಿಸಿದ್ದಾರೆ. ಇದು ಪ್ರಾಣಿಗಳ ಬಗ್ಗೆ ಸಹಾನುಭೂತಿ ಮೂಡಿಸಲು ಒಂದು ಹೊಸ ಪ್ರಯತ್ನ.
ಈ ಕೇಂದ್ರದಲ್ಲಿ ನೇರವಾಗಿ ಬೆಕ್ಕುಗಳನ್ನು ದತ್ತು ಪಡೆಯಲು, BengaluruCatAdoption.com ಮೂಲಕ ಅರ್ಜಿ ಸಲ್ಲಿಸಬಹುದು.