Alma Corner

ಕರ್ನಾಟಕದ ಧೀಮಂತ ನಾಯಕ ರಾಮಕೃಷ್ಣ ಹೆಗಡೆ!!

                ಕರ್ನಾಟಕ ಕಂಡ ಜನಪ್ರಿಯ ಹಾಗೂ ಧೀಮಂತ ರಾಜಕಾರಣಿಗಳಲ್ಲಿ ಒಬ್ಬರು, ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ. ಇವರು 10 ಜನವರಿ 1983ರಿಂದ, 10 ಆಗಸ್ಟ್‌ 1988 ರ ಅವಧಿಯಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಒಟ್ಟೂ ಆರು ಬಾರಿ ವಿಧಾನ ಸಭೆಯ ಶಾಸಕರಾಗಿ, ಎರಡು ಬಾರಿ ವಿಧಾನ ಪರಿಷತ್‌ ಸದಸ್ಯರಾಗಿ ಅಲ್ಲದೇ, ವಾಣಿಜ್ಯ ಮತ್ತು ಕೈಗಾರಿಕಾ ಮಂತ್ರಿಯಾಗಿಯೂ ಕೇಂದ್ರ ಸರ್ಕಾರದಲ್ಲಿ ಸೇವೆ ಸಲ್ಲಿಸಿದ್ದಾರೆ. 
            ರಾಮಕೃಷ್ಣ ಹೆಗಡೆ, 29 ಆಗಸ್ಟ್‌ 1926ರಂದು, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ, ಮಹಾಬಲೇಶ್ವರ ಹೆಗಡೆ ಮತ್ತು ಸರಸ್ವತಿ ಹೆಗಡೆ ದಂಪತಿಗಳ ಪುತ್ರನಾಗಿ ಜನಿಸಿದರು. ವಾರಣಾಸಿಯ ʼಕಾಶಿ ವಿದ್ಯಾಪೀಠʼದಲ್ಲಿ ಸ್ವಲ್ಪ ಸಮಯ ವ್ಯಾಸಂಗ ಮಾಡಿದ ಇವರು, ನಂತರ ಅಲಹಾಬಾದ್‌ ಯೂನಿವರ್ಸಿಟಿಯಿಂದ ಡಿಗ್ರಿ ಪಡೆದರು. ವೃತ್ತಿಪರ ವಕೀಲರಾಗಿದ್ದ ಇವರು, ಕಾಂಗ್ರೆಸ್‌ ಪಕ್ಷದ ಸಕ್ರಿಯ ಸದಸ್ಯರೂ ಆಗಿದ್ದರು. 1942 ರಲ್ಲಿ ನಡೆದ ಕ್ವಿಟ್‌ ಇಂಡಿಯಾ ಚಳುವಳಿಯಲ್ಲಿಯೂ ಇವರು ಭಾಗವಹಿಸಿದ್ದರು.

            ಇಂತಹ ರಾಮಕೃಷ್ಣ ಹೆಗಡೆ, 1954 ರಲ್ಲಿ ʼಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್‌ ಕಮಿಟಿʼಯ ಅಧ್ಯಕ್ಷರಾಗುವ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿದರು. ನಂತರ ಮೈಸೂರು ಪ್ರದೇಶ ಕಾಂಗ್ರೆಸ್‌ ಕಮಿಟಿಯ ಅಧ್ಯಕ್ಷರಾಗಿ ಬಡ್ತಿ ಪಡೆದರು. 1957ರಲ್ಲಿ ಮೊದಲ ಬಾರಿಗೆ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದ ಹೆಗಡೆ, ನಂತರ ಮಂತ್ರಿಯಾಗಿ ಬಡ್ತಿ ಪಡೆದು ಹಲವಿ ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿದರು. ನಂತರ 1974ರ ವರೆಗೆ ಕೆಲ ವರ್ಷ ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿದ್ದರು.

             ರಾಜ್ಯದ ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಆಪ್ತರಾಗಿದ್ದ ರಾಮಕೃಷ್ಣ ಹೆಗಡೆ, ಅಂದಿನ ಪ್ರಧಾನಿ ಇಂದಿರಾ ಗಾಂಧಿಯ ವಿರುದ್ಧ ಮುನಿಸಿನಿಂದ ನಿಜಲಿಂಗಪ್ಪ ಕಾಂಗ್ರೆಸ್‌ ತೊರೆದಾಗ, ಅವರನ್ನು ಹಿಂಬಾಲಿಸಿದರು. 1975 ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ, ತುರ್ತು ಪರಿಸ್ಥಿತಿ ಹೇರಿದಾಗ, ಹೆಗಡೆ ಸೇರಿದಂತೆ ಹಲವು ನಾಯಕರ ಬಂಧನವಾಯಿತು. ತುರ್ತು ಪರಿಸ್ಥಿತಿ ಅಂತ್ಯವಾಗುತ್ತಿದ್ದಂತೆ, ಜನತಾ ಪಕ್ಷವನ್ನು ಸೇರಿದ ಹೆಗಡೆ, 1978 ರಿಂದ 83ರ ಅವಧಿಯಲ್ಲಿ ರಾಜ್ಯಸಭಾ ಸದಸ್ಯರೂ ಆಗಿದ್ದರು.

             1983ರ ವಿಧಾನಸಭಾ ಚುನಾವಣೆಯಲ್ಲಿ, ಜನತಾ ಪಕ್ಷ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಮೂಲಕ, ಅಧಿಕಾರದ ಸನಿಹಕ್ಕೆ ಬಂತು. ಆಗ ಜನತಾ ಪಕ್ಷದ ಸರ್ವ ಸಮ್ಮತ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾದ ಹೆಗಡೆ, ಬಿಜೆಪಿ, ಎಡ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳ ಬೆಂಬಲ ಪಡೆದು ಸರ್ಕಾರ ರಚಿಸಿದರು. ನಂತರ 1984ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಜನತಾ ಪಾರ್ಟಿಯ ಕಳಪೆ ಪ್ರದರ್ಶನದ ನೈತಿಕ ಹೊಣೆ ಹೊತ್ತು, ತಮ್ಮ ಮುಖ್ಯಮಂತ್ತಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅಷ್ಟೇ ಅಲ್ಲ, ಸರ್ಕಾರವನ್ನು ವಿಸರ್ಜಿಸಿ ಪುನಃ ಚುನಾವಣೆಗೆ ಹೋದರು. ಆಗ 85ರ ವಿಧಾನಸಭಾ ಚುನಾವಣೆಯಲ್ಲಿ, ಜನತಾ ಪಕ್ಷ ಸ್ವಂತ ಬಲದೊಂದಿಗೆ ಅಧಿಕಾರಕ್ಕೆ ಬಂತು.

             ನಂತರ ಕರ್ನಾಟಕದ ಮುಖ್ಯಮಂತ್ರಿಯಾಗಿ ಜನಪ್ರಿಯತೆ ಗಳಿಸಿದ ಹೆಗಡೆ, ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು. ಅವರ ಸರ್ಕಾರವು ಪಂಚಾಯತ್ ರಾಜ್‌ ಇಲಾಖೆಯಲ್ಲಿ ಗಮನಾರ್ಹ ಬದಲಾವಣೆ ತಂದಿತು. ರಾಜ್ಯದ ಗ್ರಾಮ ಪಂಚಾಯತ್‌ʼಗಳಿಗೆ ಅಧಿಕಾರ ವಿಕೇಂದ್ರೀಕರಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸಿತು. 1984ರಲ್ಲಿ ಲೋಕಾಯುಕ್ತ ಸಂಸ್ಥೆಯ ಮೂಲಕ ಭ್ರಷ್ಟಾಚಾರ ವಿರೋಧಿ ಕಾನೂನನ್ನು ರೂಪಿಸಿದರು. ಅಲ್ಲದೇ ಆಡಳಿತದಲ್ಲಿ ಕನ್ನಡದ ಅನುಷ್ಠಾನದ ಮೇಲ್ವಿಚಾರಣೆಗಾಗಿ, ʼಕನ್ನಡ ಕಾವಲು ಸಮಿತಿʼಯನ್ನು ಪ್ರಾರಂಭಿಸಿದರು. ಕರ್ನಾಟಕದಲ್ಲಿ ಒಟ್ಟೂ 13 ಹಣಕಾಸು ಬಜೆಟ್‌ʼಗಳನ್ನು ಮಂಡಿಸಿದ ಖ್ಯಾತಿ ರಾಮಕೃಷ್ಣ ಹೆಗಡೆಯವರಿಗಿದೆ!

             ಮುಂದೆ ಹೆಗಡೆಯವರ ಕುಟುಂಬದ ಮೇಲೂ ಭ್ರಷ್ಟಾಚಾರದ ಆರೋಪಗಳು ಕೇಳಿಬಂದವು. ಇದಕ್ಕೆ ಸಂಬಂಧಪಟ್ಟಂತೆ ಹಲವು ರಾಜಕೀಯ ಬೆಳವಣಿಗೆಗಳು ನಡೆದವು. 1988ರಲ್ಲಿ ನಡೆದ, ರಾಜಕಾರಣಿಗಳು ಮತ್ತು ಉದ್ಯಮಿಗಳ ಫೋನ್‌ ಟ್ಯಾಪಿಂಗ್‌ ಹಗರಣದ ಸಂಬಂಧ, ಹೆಗಡೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕಾಗಿ ಬಂತು.

             ಪ್ರಧಾನಿ ವಿಪಿ ಸಿಂಗ್‌ ಅವಧಿಯಲ್ಲಿ ಹೆಗಡೆ, ಭಾರತೀಯ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದರು. 1996ರಲ್ಲಿ ಜನತಾದಳದಿಂದ ಉಚ್ಛಾಟಿಸಲ್ಪಟ್ಟ ಹೆಗಡೆ, ʼರಾಷ್ಟ್ರೀಯ ನವ ನಿರ್ಮಾಣ ವೇದಿಕೆʼ ಎಂಬ ಸಾಮಾಜಿಕ ಸಂಘಟನೆ ಹಾಗೂ ʼಲೋಕಶಕ್ತಿʼ ಎಂಬ ರಾಜಕೀಯ ಪಕ್ಷ ಸ್ಥಾಪಿಸಿದರು. ನಂತರ ಹೆಗಡೆ ನೇತೃತ್ವದ ಮೈತ್ರಿಕೂಟವು, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು 1988ರ ಲೋಕಸಭಾ ಚುನಾವಣೆಯಲ್ಲಿ ಜಯ ಸಾಧಿಸಿತು. ಹಾಗಾಗಿ ಹೆಗಡೆ 1988ರಲ್ಲಿ ಬಿಜೆಪಿ ನೇತೃತ್ವದ NDA ಕೇಂದ್ರ ಸರ್ಕಾರದಲ್ಲಿ ಸಚಿವರಾದರು. ಮುಂದೆ ಜನತಾದಳ(U)ನ್ನು ರಚಿಸಲು ಮುಖ್ಯಮಂತ್ರಿ ಜೆ.ಹೆಚ್.ಪಟೇಲ್‌ ಬಣದೊಟ್ಟಿಗೆ, ತಮ್ಮ ಲೋಕಶಕ್ತಿ ಪಕ್ಷವನ್ನು ವಿಲೀನಗೊಳಿಸಿದರು.

                    ಇನ್ನು ರಾಮಕೃಷ್ಣ ಹೆಗಡೆಯವರ ವೈಯಕ್ತಿಕ ಜೀವನದ ವಿಷಯಕ್ಕೆ ಬಂದರೆ, ಅವರಿಗೆ ಚಿಕ್ಕ ವಯಸ್ಸಿನಲ್ಲೇ ವಿವಾಹವಾಗಿತ್ತು. ಶಕುಂತಲಾ ಅಮ್ಮ ಎಂಬುವರನ್ನು ವಿವಾಹವಾದ ಹೆಗಡೆಗೆ, ಭರತ್‌ ಅಪ್ಪ ಎಂಬ ಮಗ, ಸಮತಾ ಹಾಗೂ ಮಮತಾ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದರು. ಅಲ್ಲದೇ ರಾಮಕೃಷ್ಣ ಹೆಗಡೆ ಮತ್ತು ಪ್ರತಿಭಾ ಪ್ರಹ್ಲಾದ್ ಎಂಬ ನೃತ್ಯಗಾತಿ ಇಬ್ಬರ ನಡುವೆಯೂ ವಿವಾಹೇತರ ಸಂಬಂಧಗಳಿದ್ದವು, ಅವರಿಬ್ಬರೂ ಬಹುಕಾಲದ ಒಡನಾಡಿಗಳಾಗಿದ್ದರು ಎಂಬ ಮಾತುಗಳೂ ಕೇಳಿಬಂದಿದ್ದವು. ವಿಶೇಷವೆಂದರೆ ಪ್ರತಿಭಾ, ರಾಮಕೃಷ್ಣ ಹೆಗಡೆಯವರಿಗಿಂತ ಬರೋಬ್ಬರಿ 34 ವರ್ಷ ಚಿಕ್ಕವರಾಗಿದ್ದರು! ಆದರೆ ಈ ವಯಸ್ಸಿನ ಅಂತರ ಅವರಿಬ್ಬರ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಹೀಗೆ ತಮ್ಮ ಜೀವನದುದ್ದಕ್ಕೂ ಹಲವು ಏಳು ಬೀಳುಗಳನ್ನು ಕಂಡ ಹೆಗಡೆ, 12 ಜನವರಿ 2004ರಂದು, ತಮ್ಮ 77ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಿಧನರಾದರು.

ಗಜಾನನ ಭಟ್‌

ಆಲ್ಮಾ ಮೀಡಿಯಾ ಸ್ಕೂಲ್‌ ವಿದ್ಯಾರ್ಥಿ

Show More

Leave a Reply

Your email address will not be published. Required fields are marked *

Related Articles

Back to top button