ಪತ್ನಿಯಿಂದಲೇ ಪತಿಯ ಅಪಹರಣ:ಕಾರಣ ಕೇಳಿದರೆ ನೀವು ಕೂಡ ಆಶ್ಚರ್ಯ ಪಡಬಹುದು..!
ಥಾಣೆ: ವಿಚ್ಛೇದನದ ಸಂದರ್ಭದಲ್ಲಿ ಹಣದ ವಿಷಯದಲ್ಲಿ ಜಟಾಪಟಿ ನಡೆಯುತ್ತಿದ್ದ ಕಾರಣ ಪತಿಯನ್ನು ಅಪಹರಿಸಿದ ಆರೋಪದ ಮೇಲೆ ಮಹಿಳೆ ಮತ್ತು ಅವರ ಸಂಬಂಧಿಗಳ ವಿರುದ್ಧ ಶನಿವಾರ ಥಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಉಲ್ಹಾಸನಗರದ ಪಂಜಾಬಿ ಕಾಲೋನಿಯಲ್ಲಿ ವಾಸಿಸುತ್ತಿರುವ 44 ವರ್ಷದ ವ್ಯಕ್ತಿಯನ್ನು ಅಪಹರಿಸಲಾಗಿದೆ. ಜೂನ್ 20 ರಂದು ಮನೆಯಿಂದ ಹೊರಗೆ ಹೋಗಿ ಕೆಲವು ಸಾಮಾನುಗಳನ್ನು ಖರೀದಿ ಮಾಡಲು ಹೋಗುವಾಗ ಗುಂಪೊಂದು ಅವರನ್ನು ಅಪಹರಿಸಿದೆ ಎಂದು ವರದಿಯಾಗಿದೆ. ಪತ್ನಿಯ ಷಡ್ಯಂತ್ರದಿಂದಲೇ ಈ ಅಪಹರಣ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಗ್ಯಾಂಗ್ ಅವನನ್ನು ಬೆದರಿಸಿ, ವಿಚ್ಛೇದಿತ ಪತ್ನಿಗೆ ನೀಡುವ ಪರಿಹಾರ ಮೊತ್ತವನ್ನು ₹15 ಲಕ್ಷದಿಂದ 20 ಲಕ್ಷಕ್ಕೆ ಹೆಚ್ಚಿಸುವಂತೆ ಹೆದರಿಸಿದೆ. ವಿಚ್ಛೇದನ ಪ್ರಕರಣದಲ್ಲಿ ಜೀವನಾಂಶಕ್ಕಾಗಿ ಹೆಚ್ಚು ಹಣ ನೀಡಲು ಸಾಧ್ಯವಿಲ್ಲ ಎಂದು ಪತಿಯು ಹೇಳಿದಾಗ, ಗ್ಯಾಂಗ್ ಅವರನ್ನು ಅಪಹರಿಸಿ ನಿರ್ಜನ ಸ್ಥಳಕ್ಕೆ ಕರೆದುಕೊಂಡು ಹೋಯಿತು. ಅಲ್ಲಿ, ಪತಿಯನ್ನು ಹಳೆಯ ಮನೆಯಲ್ಲಿ ಬಂಧಿಸಿ, ಅವರು ತಪ್ಪಿಸಿಕೊಳ್ಳದಂತೆ ಇನ್ನೂ ಇಬ್ಬರು ಮಂದಿಯನ್ನು ನಿಯೋಜಿಸಲಾಗಿತ್ತು. ತದನಂತರ ಅಪಹರಣಕ್ಕೆ ಒಳಗಾದ ವ್ಯಕ್ತಿಗೆ ನಿರಂತರವಾಗಿ ಜೀವ ಬೆದರಿಕೆ ಹಾಕಲಾಯಿತು.
ಸೆಪ್ಟೆಂಬರ್ 28 ರಂದು, ಪತಿಯು ಅವರ ವಶದಿಂದ ತಪ್ಪಿಸಿಕೊಂಡು ಶನಿವಾರ ಪೊಲೀಸರಿಗೆ ದೂರು ನೀಡಿದರು. ಥಾಣೆ ಪೊಲೀಸರು ಆ ವ್ಯಕ್ತಿಯ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ್ದಾರೆ.
ಅಪಹರಣಕ್ಕೆ ಒಳಗಾದ ವ್ಯಕ್ತಿಯ ಪತ್ನಿ, ಅವರ ಸಹೋದರ ಮತ್ತು ಇತರ ನಾಲ್ವರು ಸಂಬಂಧಿಗಳ ವಿರುದ್ಧ ಸೆಕ್ಷನ್ 140(2) (ಹತ್ಯೆ ಅಥವಾ ಅಪಹರಣ), ಸೆಕ್ಷನ್ 351(2) (ಕ್ರಿಮಿನಲ್ ಬೆದರಿಕೆ), ಸೆಕ್ಷನ್ 352 ( ಉದ್ದೇಶಪೂರ್ವಕವಾಗಿ ಅವಮಾನ ಮಾಡುವುದು), ಸೆಕ್ಷನ್ 115(2) (ಸ್ವಯಂಪ್ರೇರಣೆಯಿಂದ ಹಾನಿ ಮಾಡುವುದು) ಮತ್ತು ಸೆಕ್ಷನ್ 3(5) (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.