ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ..!

ಟಾಲಿವುಡ್ ಖ್ಯಾತ ನಟ ಅಲ್ಲು ಅರ್ಜುನ್ ಮನೆ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ಮಾಡಿದ್ದಾರೆ. ಮನೆ ಮೇಲೆ ಕಲ್ಲು, ಟೊಮೇಟೊ ಎಸೆದಿರುವ ದುಷ್ಕರ್ಮಿಗಳು, ಮನೆ ಗಾರ್ಡನ್‌ನಲ್ಲಿರುವ ಹೂವು ಕುಂಡಗಳನ್ನು ಕೂಡ ಒಡೆದುಹಾಕಿದ್ದಾರೆ.
ಡಿ. 4 ರಂದು ಪುಷ್ಪ-2 ದೇಶದಾದ್ಯಂತ ಬಿಡುಗಡೆಯಾಗಿತ್ತು. ಈ ವೇಳೆ ಹೈದರಾಬಾದ್‌ನ ಸಂಧ್ಯಾ ಥೀಯೇಟರ್‌ನಲ್ಲಿ ಕಾಲ್ತುಳಿತದ ಘಟನೆ ಸಂಭವಿಸಿತ್ತು. ಈ ಸಂದರ್ಭದಲ್ಲಿ, ಚಿತ್ರ ನೋಡಲು ಬಂದ ಒಬ್ಬ ಮಹಿಳೆ ಕಾಲ್ತುಳಿತದಿಂದ ಮೃತಪಟ್ಟಿದ್ದಾರೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ, ಹಲ್ಲೆ ನಡೆಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕಲ್ಲು ತೂರಾಟದಲ್ಲಿ ಪಾಲ್ಗೊಂಡವರು ಒಸ್ಮಾನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಎಂದು ಹೇಳಲಾಗಿದೆ. ಹೈದರಾಬಾದ್‌ನ ಜುಬಿಲಿ ಹಿಲ್ಸ್ ನಲ್ಲಿರುವ ನಟ ಅಲ್ಲು ಅರ್ಜುನ್ ಮನೆ ಮುಂದೆ ಹಲ್ಲೆ ಮಾಡಿದ್ದು ಕೆಲ ಕಾಲ ಆತಂಕ ಉಂಟುಮಾಡಿತ್ತು.

ಭಾನುವಾರ ಮದ್ಯಾಹ್ನ ವೇಳೆಗೆ ಈ ಘಟನೆ ಸಂಭವಿಸಿತು ಎಂದು ವರದಿಯಾಗಿದೆ. ಪ್ರತಿಭಟನಾಕಾರರು ಅಲ್ಲು ಅರ್ಜುನ್ ವಿರುದ್ಧ ಘೋಷಣೆಗಳಿರುವ ಫಲಕಗಳನ್ನು ಹಿಡಿದು ಪ್ರತಿಭಟಿಸಿದ್ದಾರೆ.
ಸಂಧ್ಯಾ ಥೀಯೇಟರ್ ಪ್ರಕರಣದಲ್ಲಿ ಮಹಿಳೆ ರೇವತಿ ಸಾವಿಗೆ ಮತ್ತು ಅವರ ಮಗ ಸಾಯಿ ತೇಜ ಅಸ್ವಸ್ಥನಾಗಲು ನಟ ಅಲ್ಲು ಅರ್ಜುನ್ ಕಾರಣವೆಂದು ಈ ಪ್ರತಿಭಟನೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್ ಅವರ ಮನೆಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.
ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಶನಿವಾರ ವಿಧಾನಸಭೆಯಲ್ಲಿ ಅಲ್ಲು ಅರ್ಜುನ್ ವಿರುದ್ಧ ಕಿಡಿ ಕಾರಿದ್ದರು. ಮಹಿಳೆಯ ಸಾವಿಗೆ ಅಲ್ಲು ಅರ್ಜುನ್ ಕಾರಣವೆಂದು ಸಭೆಯಲ್ಲಿ ಆರೋಪಿಸಿದ್ದರು. ಇದಕ್ಕೆ ಅಲ್ಲು ಅರ್ಜುನ್ ಪ್ರತಿಕ್ರಿಯಿಸಿದ್ದಾರೆ. “ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ, ನನ್ನ ಕಡೆಯಿಂದ ಯಾವುದೇ ತಪ್ಪು ಆಗಿಲ್ಲ, ನಾನು ಥೀಯೇಟರ್‌ಗೆಗೆ ಹೋದಾಗ ಪೊಲೀಸರು ಸಹ ಇದ್ದರು, ಅನುಮತಿ ಇಲ್ಲ ಅಂದರೆ ನನ್ನನ್ನು ಒಳಗಡೆ ಯಾಕೆ ಬಿಡುತ್ತಿದ್ದರು” ಎಂದು ಹೇಳಿದ್ದಾರೆ.

ಧನ್ಯಾ ರೆಡ್ಡಿ ಎಸ್
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ