ಹುಲಿ ದತ್ತು ಪಡೆದ ನಟಿ ಸಂಯುಕ್ತ ಹೊರನಾಡು: ಮೆಚ್ಚುಗೆ ವ್ಯಕ್ತಪಡಿಸಿದ ಪ್ರಾಣಿ ಪ್ರಿಯರು!
ಬೆಂಗಳೂರು: ಕನ್ನಡ ಚಲನಚಿತ್ರರಂಗದ ಬಹುಮುಖ ಪ್ರತಿಭೆ ಸಂಯುಕ್ತ ಹೊರನಾಡು, ಸಿನಿಮಾಗಳಲ್ಲಿ ಮಾತ್ರವಲ್ಲ, ಸಾಮಾಜಿಕ ಕೆಲಸಗಳಲ್ಲಿಯೂ ತಮ್ಮದೇ ಆದ ಮುನ್ನಡೆಯನ್ನು ಸಾಧಿಸುತ್ತಿದ್ದಾರೆ. ಪ್ರಾಣ ಅನಿಮಲ್ ಫೌಂಡೇಶನ್ ಅಡಿಯಲ್ಲಿ ಪ್ರಾಣಿಗಳ ರಕ್ಷಣೆಗೆ ಅಂಬುಲೆನ್ಸ್ ಸೇವೆ ನೀಡುತ್ತಿರುವ ಈ ನಟಿ ಈಗ ಪ್ರಾಣಿ ಪ್ರೇಮಿಗಳಲ್ಲಿ ಮತ್ತಷ್ಟು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದೀಗ ಸಂಯುಕ್ತ, ಟೆಕೆಯಾನ್ ಸಂಸ್ಥೆಯ ಸಹಯೋಗದಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 28 ತಿಂಗಳ ಸಿಂಚನ ಎಂಬ ಹೆಣ್ಣು ಹುಲಿ ಮರಿಯನ್ನು ದತ್ತು ಪಡೆದಿದ್ದಾರೆ.
ಸಿಂಚನ ಎಂಬ ಹುಲಿ ಮರಿಗೆ ನರದೌರ್ಬಲ್ಯ ಸಮಸ್ಯೆ ಇದ್ದುದರಿಂದ ಕಾಡಿನಲ್ಲಿ ಬದುಕಲು ಕಷ್ಟಕರವಾಗಿತ್ತು. ಅದರ ದಿನನಿತ್ಯದ ಆಹಾರ, ನಿರ್ವಹಣೆ, ಮತ್ತು ಪಶು ಚಿಕಿತ್ಸೆಯ ಜವಾಬ್ದಾರಿಯನ್ನು ಹೊತ್ತಿರುವ ಸಂಯುಕ್ತ, ಪ್ರಾಣಿ ರಕ್ಷಣಾ ಕಾರ್ಯದಲ್ಲಿ ನಿಸ್ಸಂದೇಹವಾಗಿ ಮಾದರಿಯಾಗಿದ್ದಾರೆ.
ಟೆಕೆಯಾನ್ ಸಂಸ್ಥೆಯ ಮುಖ್ಯಸ್ಥ ರಾಣಾ ರೊಬಿಲ್ಡ್, ಪ್ರಾಣ ಅನಿಮಲ್ ಫೌಂಡೇಶನ್, ಹಾಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳಿಗೆ ಈ ಅವಕಾಶ ನೀಡಿದಕ್ಕಾಗಿ ಧನ್ಯವಾದಗಳನ್ನು ತಿಳಿಸಿದರು. ಅವರು ತಿಳಿಸಿದಂತೆ, ಆರೋಗ್ಯ, ಶಿಕ್ಷಣ, ಸಮಾನತೆ ಮತ್ತು ಸುಸ್ಥಿರತೆ ಎಂಬುದು ಪ್ರಸ್ತುತ CSR ಉದ್ದೇಶವಾಗಿದೆ.
ಈ ಸಂದರ್ಭದಲ್ಲಿ ಸಂಯುಕ್ತ ಹೊರನಾಡು ಮಾತನಾಡುತ್ತ, “ಟೆಕೆಯಾನ್ ಜೊತೆ ಕೈ ಜೋಡಿಸಿರುವುದು ನನಗೆ ತುಂಬಾ ಸಂತೋಷ ತಂದಿದೆ. ಪ್ರಾಣಿಗಳ ಮೇಲೆ ನನ್ನ ಪ್ರೀತಿ ಮತ್ತು ಕರ್ತವ್ಯ ತಿಳಿದು ಈ ಸಹಾಯ ಮಾಡುತ್ತಿರುವ ಟೆಕೆಯಾನ್ ಸಂಸ್ಥೆಗೆ ಧನ್ಯವಾದಗಳು,” ಎಂದರು.
ಈಗಾಗಲೇ 500 ಪ್ರಾಣಿಗಳನ್ನು ರಕ್ಷಿಸಿರುವ ಟೆಕೆಯಾನ್ ಮತ್ತು ಪ್ರಾಣ ಸಂಸ್ಥೆ, ಕನಕಪುರ ರಸ್ತೆಯಲ್ಲಿ ಪ್ರಾಣಿ ರಕ್ಷಣೆಗೆ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಿ ನಿರಂತರ ಸೇವೆ ಒದಗಿಸುತ್ತಿದೆ.