20 ವರ್ಷಗಳ ನಂತರ ಮತ್ತೆ ಬೆಳ್ಳಿಪರದೆಯತ್ತ ನಟಿ ಶ್ವೇತಾ: ‘ಚೌಕಿದಾರ್’ ಸಿನಿಮಾದ ಮೂಲಕ ಗ್ರಾಂಡ್ ಎಂಟ್ರಿ!

ಬೆಂಗಳೂರು: ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಕ್ರಶ್ ಆಗಿದ್ದ ಶ್ವೇತಾ, ‘ಚೌಕಿದಾರ್’ ಚಿತ್ರದೊಂದಿಗೆ ಮತ್ತೆ ಬೆಳ್ಳಿತೆರೆಗೆ ಮರಳಿ ಬಂದಿದ್ದಾರೆ. ಚೈತ್ರದ ಪ್ರೇಮಾಂಜಲಿ, ಕರ್ಪೂರದ ಗೊಂಬೆ, ಲಕ್ಷ್ಮಿ ಮಹಾಲಕ್ಷ್ಮಿ, ಮತ್ತು ಇನ್ನಿತರ ಹಿಟ್ ಸಿನಿಮಾಗಳ ಮೂಲಕ ಜನಮನ ಗೆದ್ದ ನಟಿ, 2003 ರ ‘ಕುಟುಂಬ’ ಸಿನಿಮಾದ ನಂತರ ವಿಶ್ರಾಂತಿಗಿಳಿದಿದ್ದರು. ಹಲವು ವರ್ಷಗಳ ಕಾಲ ಸಿನಿಮಾದಿಂದ ಕಣ್ಮರೆಯಾದ ಅವರು ಇದೀಗ ಮತ್ತೆ ಬೆಳ್ಳಿಪರದೆಯಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
ಕೇವಲ ಕನ್ನಡದಲ್ಲೇ ಅಲ್ಲ, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿಯೂ ಶ್ವೇತಾ ಹೆಸರಾಗಿದ್ದು, ತಮಿಳು ಪ್ರೇಕ್ಷಕರಿಗೆ ವಿನೋದಿನಿಯಾಗಿ ಪರಿಚಿತರು. ಪ್ರಸ್ತುತ, ‘ಲಕ್ಷ್ಮಿ ನಿವಾಸ’ ಎಂಬ ಧಾರಾವಾಹಿಯ ಮೂಲಕ ಸಣ್ಣ ಪರದೆಯಲ್ಲಿ ನಿರಂತರ ಬ್ಯುಸಿಯಾಗಿರುವ ಅವರು, ಇದೀಗ ಬಿಗ್ ಸ್ಕ್ರೀನ್ ಗೆ ಬರೋಬ್ಬರಿ 20 ವರ್ಷಗಳ ನಂತರ ‘ಚೌಕಿದಾರ್’ ಮೂಲಕ ಪುನ: ಪ್ರವೇಶ ಮಾಡಿದ್ದು ಹರ್ಷದ ಸಂಗತಿಯಾಗಿಸಿದೆ.
ಪ್ರೀತಿ-ಪ್ರೇಮದ ಕಥೆಯ ಹೀರೋ ಪೃಥ್ವಿ ಅಂಬಾರ್ ‘ಚೌಕಿದಾರ್’ ನಲ್ಲಿ ರಗಡ್ ಅವತಾರ, ಪ್ರತಿ ಬಾರಿ ಹೊಸ ಕಥೆಯನ್ನು ಹೆಕ್ಕುವ ಚಂದ್ರಶೇಖರ್ ಬಂಡಿಯಪ್ಪ, ಈ ಬಾರಿಗೆ ಹೊಸ ಕಥೆಯೊಂದಿಗೆ ‘ಚೌಕಿದಾರ್’ ಚಿತ್ರದ ಮೂಲಕ ಪ್ರೇಕ್ಷಕರ ಮನ ಸೆಳೆಯಲು ಸಿದ್ಧರಾಗಿದ್ದಾರೆ. ಚಿತ್ರದ ಹೀರೋ ಪೃಥ್ವಿ ಅಂಬಾರ್, ಈ ಚಿತ್ರದಲ್ಲಿ ಸಂಪೂರ್ಣವಾಗಿ ವಿಭಿನ್ನವಾದ ರಗಡ್ ಲುಕ್ ತಾಳಿದ್ದು, ಇದು ಚಿತ್ರದ ಪ್ರಾಧಾನ್ಯತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಚಿತ್ರದಲ್ಲಿ ಧನ್ಯ ರಾಮ್ ಕುಮಾರ್ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಹಿರಿಯ ನಟ ಸಾಯಿ ಕುಮಾರ್ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ತಂತ್ರಜ್ಞಾನ ತಂಡ: ಸಂಗೀತ ನಿರ್ದೇಶಕ ಸಚಿನ್ ಬಸ್ರೂರು ಬಿಗ್ ಸ್ಕ್ರೀನ್ ಸಂಭ್ರಮಕ್ಕೆ ತನ್ನ ವೈಶಿಷ್ಟ್ಯತೆಯ ಸಂಗೀತದ ಮೂಲಕ ಮೆರುಗು ನೀಡುತ್ತಿದ್ದಾರೆ. ಕ್ಯಾಮೆರಾ ಹಿಡಿದು ಸಿದ್ದು ಕಂಚನಹಳ್ಳಿ ನಿಂತಿದ್ದು, ಅವರ ಛಾಯಾಗ್ರಹಣ ಕಾಣಲು ಪ್ರೇಕ್ಷಕರು ಕಾದು ಕುಳಿತಿದ್ದಾರೆ. ಜೊತೆಗೆ, ಗೀತರಚನೆಗೆ ಪ್ರಮೋದ್ ಮರವಂತೆ, ಸಂತೋಷ್ ನಾಯಕ್, ವಿ.ನಾಗೇಂದ್ರ ಪ್ರಸಾದ್ ಮುಂತಾದವರು ಕೊಡುಗೆ ನೀಡಿದ್ದಾರೆ.