ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಕಟ್ಟಡ ಕುಸಿತ ಇಬ್ಬರು ಕಾರ್ಮಿಕರ ಸಾವು 17 ಮಂದಿಗೆ ಗಾಯ.

ಉತ್ತರ ಪ್ರದೇಶ: ಮುಜಾಫರ್‌ನಗರದಲ್ಲಿರುವ ಜನಸತ್ ಪಟ್ಟಣದ ತಾಲ್ಡಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಟ್ಟಡದೊಳಗೆ ಹಲವಾರು ಕಾರ್ಮಿಕರು ಕೆಲಸ ಮಾಡುತ್ತಿದ್ದರು.
ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಭಾನುವಾರ ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ ಕುಸಿದು ದುರಂತ ಸಂಭವಿಸಿದ್ದು, ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು 17 ಮಂದಿ ಗಾಯಗೊಂಡಿದ್ದಾರೆ. ಎಎನ್‌ಐ ವರದಿಯ ಪ್ರಕಾರ ಕಟ್ಟಡದ ಅವಶೇಷಗಳಿಂದ 19 ಕಾರ್ಮಿಕರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ. ಸದ್ಯ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೋಹಿತ್ (30) ಮತ್ತು ಪಿಯೂಷ್ (28) ದುರಂತ ಘಟನೆಯಲ್ಲಿ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮುಜಾಫರ್‌ನಗರದ ಜನಸತ್ ಪಟ್ಟಣದ ತಾಲ್ಡಾ ಗ್ರಾಮದಲ್ಲಿ ಹಲವಾರು ಕಾರ್ಮಿಕರು ಕಟ್ಟಡದೊಳಗೆ ಕೆಲಸ ಮಾಡುತ್ತಿದ್ದಾಗ ಇದು ಸಂಭವಿಸಿದೆ. ಘಟನೆಗೆ ಸಂಬಂಧಿಸಿದಂತೆ ಜಮೀನು ಮಾಲೀಕ ಮತ್ತು ಗುತ್ತಿಗೆದಾರ ಸೇರಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಸಿಕ್ಕಿಬಿದ್ದಿರುವ ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸಲು ಮತ್ತು ಗಾಯಾಳುಗಳಿಗೆ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳಲು ಆಡಳಿತಕ್ಕೆ ನಿರ್ದೇಶನ ನೀಡಿದ್ದಾರೆ.