ಅಂಕೋಲದ ಶಿರೂರು ಗುಡ್ಡ ಕುಸಿತ; ಮಣ್ಣಿನ ಅಡಿಯಲ್ಲಿ ಲಾರಿ ಇರುವುದು ಖಚಿತ!

ಉತ್ತರ ಕನ್ನಡ: ಕಳೆದ ಮಂಗಳವಾರ ಜುಲೈ 16 ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗ್ರಾಮವು ಭೀಕರ ಗುಡ್ಡ ಕುಸಿತಕ್ಕೆ ಸಾಕ್ಷಿಯಾಗಿದೆ. ಈ ಭಯಾನಕ ಗುಡ್ಡ ಕುಸಿತಕ್ಕೆ ಒಳಗಾಗಿ, ಸಾಗರ ಮೂಲದ ಲಾರಿ ಹಾಗೂ ಕೇರಳ ಮೂಲದ ಚಾಲಕ ಅರ್ಜುನ್ ಎಂಬಾತ ಭೂ ಸಮಾಧಿ ಆದ ಬಗ್ಗೆ ತಿಳಿದು ಬಂದಿದೆ. ಆದರೆ ಲಾರಿ ಮಣ್ಣಿನ ಅಡಿಯಾಗಿರುವ ಬಗ್ಗೆ ಯಾವುದೇ ಖಚಿತ ಮಾಹಿತಿ ತಿಳಿದು ಬಂದಿರಲಿಲ್ಲ.
ಘಟನೆ ನಡೆದ ಎರಡು ದಿನಗಳ ನಂತರ ಲಾರಿ ಮಾಲೀಕ, ತನಗೆ ಸೇರಿದ ಲಾರಿ ಜಿಪಿಎಸ್ ಶಿರೂರು ಬಳಿಯೇ ಕಾಣುತ್ತಿದೆ. ಲಾರಿ ಹಾಗೂ ಚಾಲಕ ಅರ್ಜುನ್ ಅವರನ್ನು ಹುಡುಕಿಕೊಡಿ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಮಾಲೀಕರ ಮನವಿಗೆ ಸ್ಪಂದಿಸಿದ ಜಿಲ್ಲಾಡಳಿತಕ್ಕೆ ಲಾರಿ ಹಾಗೂ ಅದರ ಚಾಲಕ ಮಣ್ಣಡಿ ಆಗಿರುವ ಬಗ್ಗೆ ಖಚಿತ ಸುಳಿವು ಸಿಕ್ಕಿದೆ. ಈ ಬಗ್ಗೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಖಾತ್ರಿ ಪಡಿಸಿದ್ದಾರೆ.
ಶಿರೂರು ಗ್ರಾಮದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದ ಈ ದುರಂತದಲ್ಲಿ ಸರಿಸುಮಾರು 20 ಜನರು ಮೃತಪಟ್ಟಿದ್ದಾರೆ ಎಂದು ಸ್ಥಳಿಯರು ಹೇಳುತ್ತಿದ್ದಾರೆ. ಒಂದು ಬಿಳಿ ಬಣ್ಣದ ಬೆಂಜ್ ಕಾರು ಕೂಡ ಮಣ್ಣಿನ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿದೆ ಎಂದು ಹೇಳಲಾಗುತ್ತಿದೆ.