ರಾಜ್ ಬಿ ಶೆಟ್ಟಿ ಜೊತೆ ಅನುರಾಗ್ ಕಶ್ಯಪ್: ಸೈಲೆಂಟಾಗಿ ನಡೆಯುತ್ತಿದೆಯೇ ಸಿನಿಮಾ?
ಬೆಂಗಳೂರು: ಬಾಲಿವುಡ್‌ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಅವರೊಂದಿಗೆ ಕನ್ನಡದ ಅದ್ಬುತ ನಟ ಹಾಗೂ ನಿರ್ದೇಶಕರಾದ ರಾಜ್ ಬಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರು ತೆಗೆದುಕೊಂಡ ಪೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ನಿಶ್ಯಬ್ದವಾಗಿ ಯಾವುದಾದರೂ ಸಿನೆಮಾ ತಯಾರಿಯಲ್ಲಿ ಇಬ್ಬರೂ ತೊಡಗಿದ್ದಾರೆಯೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಹಬ್ಬಿ ಕೊಂಡಿದೆ.
ರಾಜ್ ಬಿ ಶೆಟ್ಟಿ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅನುರಾಗ್ ಕಶ್ಯಪ್ ಅವರ ಜೊತೆಗಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ, “ನಾನು ಅನುಸರಿಸುತ್ತಿರುವ ಫಿಲ್ಮ್ ಮೇಕರ್ ಅನುರಾಗ್ ಕಶ್ಯಪ್” ಎಂದು ಬರೆದು ಕೊಂಡಿದ್ದಾರೆ. ಈ ಚಿತ್ರದಲ್ಲಿ ಬರಹಗಾರ, ನಿರ್ದೇಶಕ ಹಾಗೂ ಪೆದ್ರೊ ಚಿತ್ರದ ಎಡಿಟರ್ ನಟೇಶ್ ಹೆಗಡೆ ಅವರು ಕೂಡ ಕೂಡಿಕೊಂಡಿದ್ದರು.
ಗರುಡ ಗಮನ ವೃಷಭ ವಾಹನ ಚಿತ್ರಕ್ಕೆ ಪ್ರಶಂಸೆ:
2021ರಲ್ಲಿ ತೆರೆಕಂಡಿದ್ದ ಗ್ಯಾಂಗ್ಸ್ಟರ್ ಮೂವಿ ‘ಗರುಡ ಗಮನ ವೃಷಭ ವಾಹನ’ ಚಿತ್ರವನ್ನು ಅನುರಾಗ್ ಕಶ್ಯಪ್ ಹಾಡಿ ಹೊಗಳಿದ್ದರು. ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಅವರ ಕೆಲಸವನ್ನು ಶ್ಲಾಘಿಸಿದ್ದರು. ರಾಜ್ ಅವರನ್ನು ತನ್ನ ಹೊಸ ನೆಚ್ಚಿನ ನಿರ್ದೇಶಕ ಎಂದು ಹೇಳಿದ್ದರು ಅನುರಾಗ್ ಕಶ್ಯಪ್.
ದಿಗ್ಗಜರ ಭೇಟಿಯ ಹಿಂದಿನ ಮರ್ಮವೇನು?
ಕನ್ನಡ ಚಿತ್ರರಂಗದಲ್ಲಿ ಸಂಚಲನ ಉಂಟು ಮಾಡಿರುವ ರಾಜ್ ಬಿ ಶೆಟ್ಟಿ ಅವರೊಂದಿಗೆ, ಗ್ಯಾಂಗ್ಸ್ಟರ್ ಚಿತ್ರಗಳಿಗೆ ಹೆಸರುವಾಸಿ ಆಗಿರುವ ಅನುರಾಗ್ ಕಶ್ಯಪ್ ಸೇರಿಸುವಿಕೆ ಮುಂದೆ ಏನೋ ಒಂದು ದೊಡ್ಡ ಸುದ್ದಿ ಬರುವ ಸೂಚನೆಗಳನ್ನು ನೀಡುತ್ತಿದೆ.