ಹವ್ಯಕ ಸಮ್ಮೇಳನದಲ್ಲಿ ಅನಾವರಣಗೊಂಡ ʼಅಡಿಕೆ ಪ್ರಪಂಚʼ!!

ಬೆಂಗಳೂರಿನ ಅರಮನೆ ಮೈದಾನದಲ್ಲಿ, ಡಿಸೆಂಬರ್ 27ರಿಂದ 29ರವರೆಗೆ ಮೂರನೇ ಆವೃತ್ತಿಯ ʼವಿಶ್ವ ಹವ್ಯಕ ಸಮ್ಮೇಳನʼ ನಡೆಯಿತು. ಹವ್ಯಕರ ಜೀವನ ಶೈಲಿ, ಸಂಪ್ರದಾಯ, ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದ ಈ ಸಮ್ಮೇಳನದಲ್ಲಿ, ಹವ್ಯಕರ ಜೀವನಾಡಿಯೇ ಆದ ಅಡಿಕೆ ಹಾಗೂ ಅಡಿಕೆಗೆ ಸಂಬಂಧಿಸಿದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ನಡೆಯಿತು.
ಹವ್ಯಕರ ಮುಖ್ಯ ಕಸುಬು ಕೃಷಿಯಾಗಿದ್ದು, ಅದರಲ್ಲೂ ʼಅಡಿಕೆʼ ಅಕ್ಷರಶಃ ಹವ್ಯಕರ ಜೀವನಾಡಿಯೇ ಆಗಿದೆ. ಮಲೆನಾಡು ಹಾಗೂ ಕರಾವಳಿ ಭಾಗದ ಹೆಚ್ಚಿನ ಹವ್ಯಕ ಕೃಷಿಕರು, ತಮ್ಮ ಜೀವನಾಧಾರವಾಗಿ ಅಡಿಕೆಯನ್ನೇ ಹೆಚ್ಚು ನೆಚ್ಚಿಕೊಂಡಿದ್ದಾರೆ. ಹಾಗಾಗಿ ಸಮ್ಮೇಳನದಲ್ಲಿ ಅಡಿಕೆ ಹಾಗೂ ಅದಕ್ಕೆ ಸಂಬಂಧಿಸಿದ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಲು, ʼಅಡಿಕೆ ಪ್ರಪಂಚʼ ಎನ್ನುವ ಮಳಿಗೆಯನ್ನು ತೆರೆಯಲಾಗಿತ್ತು. ಮಳಿಗೆಯಲ್ಲಿ ಪ್ರದರ್ಶನಕ್ಕಿದ್ದ ವಿವಿಧ ಪ್ರಕಾರದ ಅಡಿಕೆ ಹಾಗೂ ಅದರ ಉತ್ಪನ್ನಗಳ ಬಗ್ಗೆ , ಮಳಿಗೆಯ ಆಯೋಜಕರು ಸವಿಸ್ತಾರ ಮಾಹಿತಿ ನೀಡಿದರು.

ಮೊದಲನೆಯದಾಗಿ ಅಡಿಕೆ ಮರವೇರಲು ಬಳಸುವ ʼಕಾಲ್ದಳೆʼಯ ಬಗ್ಗೆ ಆಯೋಜಕರು ಮಾಹಿತಿ ನೀಡಿದರು. ಮರವೇರಿದ ನಂತರ ಈ ʼಕಾಲ್ದಳೆʼಯ ನೆರವಿನಿಂದ ಕುಳಿತುಕೊಳ್ಳಬಹುದೆಂದು ತಿಳಿಸಿದರು. ನಂತರ ಅಡಿಕೆಗೆ ರೋಗ ಬಾರದಂತೆ ಔಷಧ ಸಿಂಪಡಿಸಲು ಬಳಸುತ್ತಿದ್ದ ಯಂತ್ರದ ಬಗ್ಗೆ ವಿವರಿಸಿದರು. ಈ ಯಂತ್ರ ಬಳಕೆಗೆ ಬರುವುದಕ್ಕಿಂತಲೂ ಮುಂಚೆ, ಅಡಿಕೆಯ ಒಣಗಿದ ಹಾಳೆಗಳನ್ನು ಒಂದಕ್ಕೊಂದು ನೇಯ್ದು, ಅದನ್ನು ಮರಕ್ಕೆ ಕಟ್ಟುವುದರ ಮುಖಾಂತರ, ಅಡಿಕೆಗೆ ಕೊಳೆ ರೋಗ ಬಾರದಂತೆ ತಡೆಯುತ್ತಿದ್ದರು ಎಂದರು. ಪಕ್ಕದಲ್ಲಿಯೇ ಅಡಿಕೆಗೆ ಕೊಳೆರೋಗ ಬಾರದಂತೆ ಸಿಂಪಡಿಸುವ ಔಷಧವನ್ನು ತಯಾರಿಸುವ ತುತ್ತ ಹಾಗೂ ಸುಣ್ಣ, ಕತ್ತಿ, ಹಾರೆ, ಗುದ್ದಲಿ ಮುಂತಾದ ಕೃಷಿಗೆ ಉಪಯೋಗಿಸುವ ಸಲಕರಣೆಗಳಿದ್ದವು. ನಂತರ ವಿಶೇಷವಾಗಿ ದೇವರ ಪೂಜೆಗೆ ಬಳಸುವ ಹಿಂಗಾರ, ಹಸಿ ಅಡಿಕೆ(ಬೆಟ್ಟೆ ಅಡಿಕೆ), ಹಣ್ಣು ಅಡಿಕೆ(ಕೆಂಪಡಿಕೆ), ಕಾಳುಮೆಣಸು, ಹಾಗೂ ಅಡಿಕೆಯ ಉಪ ಉತ್ಪನ್ನಗಳಾದ ಶುಂಠಿ, ಅರಿಶಿಣ ಮುಂತಾದವುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ನಂತರ ವಿವಿಧ ಪ್ರಕಾರದ ಬುಟ್ಟಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಮುಖ್ಯವಾಗಿ ಅಡಿಕೆ ಕೊಯ್ದಾದ ನಂತರ ಅದನ್ನು ಸಾಗಿಸಲು ಬಳಸುವ ಹೆಡಿಗೆ, ಕೊಳಗ, ಹಾಗೂ ಅಡಿಕೆಯನ್ನು ಬೇಯಿಸಲು ಉಪಯೋಗಿಸುವ ಹಂಡೆಯ ಬಗ್ಗೆ ಮಾಹಿತಿ ನೀಡಲಾಯಿತು. ಅಡಿಕೆಯನ್ನು ಬೇಯಿಸಿದ ನಂತರ ಬರುವ ಚೊಗರಿನಿಂದ ವಿವಿಧ ಪ್ರಕಾರಗಳ ಉತ್ಪನ್ನಗಳನ್ನು ತಯಾರಿಸುತ್ತಿರುವುದಾಗಿ ಆಯೋಜಕರು ಮಾಹಿತಿ ನೀಡಿದರು. ನಂತರ ಹಳೆಯ ಕಾಲದ ಸಾಂಪ್ರದಾಯಿಕ ಸೋಗೆ ಮನೆ(ಅಡಿಕೆ ಗರಿ)ಯ ಪುಟ್ಟ ಮಾದರಿಯನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಹಿಂದಿನ ಕಾಲದ ಹವ್ಯಕರ ಮನೆಗಳಲ್ಲಿ ಅಡಿಕೆ ಗರಿಗಳನ್ನು(ಸೋಗೆ) ಯಾವ ರೀತಿ ಬಳಸಲಾಗುತ್ತಿತ್ತು ಎಂಬ ಬಗ್ಗೆ ಆಯೋಜಕರು ಮಾಹಿತಿ ನೀಡಿದರು. ವಿವಿಧ ಪ್ರಕಾರದ ಅಡಿಕೆ ಮಾದರಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಅವೆಲ್ಲ ಮಾದರಿಗಳ ಬಗ್ಗೆ ಸವಿಸ್ತಾರವಾಗಿ ಆಯೋಜಕರು ಮಾಹಿತಿ ನೀಡಿದರು.

ಕೊನೆಯದಾಗಿ ಅಡಿಕೆಯ ಉತ್ಪನ್ನಗಳಾದ ಹಾರಗಳು, ಆಧುನಿಕ ಹಾಗೂ ಹಳೆಯ ಕಾಲದ ಟೊಪ್ಪಿಗೆಗಳು, ಊಟದ ನಂತರ ಎಲೆ ಅಡಿಕೆ ಸೇವಿಸಲು ಬಳಸುವ ʼಕವಳದ ಬಟ್ಟಲು, ಒಣಗಿದ ಅಡಿಕೆ ಹಾಳೆಗಳಿಂದ ತಯಾರಿಸಿದ ಊಟೋಪಚಾರಕ್ಕೆ ಬಳಸುವ ಉತ್ಪನ್ನಗಳು, ಇವೆಲ್ಲವುಗಳ ಬಗ್ಗೆ ಆಯೋಜಕರು ಸವಿಸ್ತಾರವಾದ ಮಾಹಿತಿ ನೀಡಿದರು. ಒಟ್ಟಿನಲ್ಲಿ ಹವ್ಯಕ ಸಮ್ಮೇಳನದ ಈ ʼಅಡಿಕೆ ಪ್ರಪಂಚʼದಲ್ಲಿ ಮಲೆನಾಡಿನ ಅಡಿಕೆಯ ಸೊಬಗೇ ಮೈದಳೆದಂತಿತ್ತು.
ಗಜಾನನ ಭಟ್
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿ