“ಬಡವ್ರ ಮಕ್ಕಳು ಬೆಳಿಬೇಕು ಕಣ್ರಯ್ಯ”: ಚಿತ್ರೀಕರಣ ಮುಕ್ತಾಯ, ಬಿಡುಗಡೆಗೆ ಸಿದ್ಧತೆ..!

ಬೆಂಗಳೂರು; ಶ್ರೀ ರಾಮ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ, ಸಿ.ಎಸ್ ವೆಂಕಟೇಶ್ ಅವರ ನಿರ್ಮಾಣದ “ಬಡವ್ರ ಮಕ್ಕಳು ಬೆಳಿಬೇಕು ಕಣ್ರಯ್ಯ” ಚಿತ್ರದ ಚಿತ್ರೀಕರಣ ಈಗ ಮುಗಿದಿದ್ದು, ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ನವಂಬರ್ 10 ರಂದು ಟ್ರೇಲರ್ ಬಿಡುಗಡೆಯಾಗಲಿದ್ದು, ಪ್ರೇಕ್ಷಕರ ನಿರೀಕ್ಷೆ ದುಪ್ಪಟ್ಟು ಆಗುತ್ತಿದೆ.
ಚಿತ್ರದ ಕಥೆ ಬಡ ಕುಟುಂಬದಲ್ಲಿ ಹುಟ್ಟಿದ ಮಕ್ಕಳ ಜೀವನ, ತಾಯ್ತಂದೆ ಪಡುವ ಹೋರಾಟ, ಬಡತನದ ಸವಾಲುಗಳು ಮತ್ತು ಸಮಾಜದ ಕಠೋರ ಸತ್ಯಗಳನ್ನು ತೋರಿಸುವ ಪ್ರಯತ್ನ ಮಾಡಿದೆ. ನಿರ್ದೇಶಕ ಮಂಜು ಕವಿ ಈ ಚಿತ್ರಕ್ಕೆ ಬರಹ, ಸಂಭಾಷಣೆ ಮತ್ತು ಸಂಗೀತ ಸಂಯೋಜನೆ ಮೂಲಕ ಹೊಸ ಛಾಯೆಗಳನ್ನು ನೀಡಿದ್ದು, ಪ್ರೇಕ್ಷಕರನ್ನು ತಲುಪುವ ವಿಶಿಷ್ಟ ಕಥಾವಸ್ತುವನ್ನು ತಂದಿದ್ದಾರೆ. ಅವರ ಜೊತೆಗೆ ನಿರ್ದೇಶನ ತಂಡದಲ್ಲಿ ಎಸ್ ಜೆ ಸಂಜಯ್, ಗಿರೀಶ್ ಸಾಕಿ, ಸಂಗೀತ ಶೆಟ್ಟಿ ಅವರಿದ್ದಾರೆ.
ಸಂಗೀತ ನಿರ್ದೇಶಕ ವಿನು ಮನಸು ಅವರ ಹಿನ್ನೆಲೆ ಸಂಗೀತ ಮತ್ತು ವಿವಿಧ ಕಲಾವಿದರ ಮೂಲಕ ಮೂಡಿ ಬಂದ ನಾಲ್ಕು ಹಾಡುಗಳು ಚಿತ್ರಕ್ಕೆ ಇನ್ನಷ್ಟು ಮೆರುಗು ಸೇರಿಸುತ್ತವೆ. ಚಿತ್ರದಲ್ಲಿ ಸುಚೇಂದ್ರ ಪ್ರಸಾದ್, ಸಂಗೀತ ಮತ್ತು ಅವರ ಮಕ್ಕಳು ರಾಜವರ್ಧನ್, ಲಾವಣ್ಯ, ವೈಭವಿ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ.
ನಿರ್ದೇಶಕ ಮಂಜು ಕವಿ ಪ್ರಕಾರ, ಈ ಚಿತ್ರ ಬಡತನದ ಸಂಕಷ್ಟಗಳನ್ನು ನಿಜರೂಪದಲ್ಲಿ ತೋರಿಸಿದ್ದು, ಸಮಾಜದ ಗಮನ ಸೆಳೆಯುವಂತಹ ಪ್ರಾಮಾಣಿಕ ಪ್ರಯತ್ನವಾಗಿದೆ.