ಬಘೀರ ಟ್ರೈಲರ್ ಔಟ್: ರಾಕ್ಷಸ ರೂಪದ ದೇವರ ಅವತಾರ…!

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಬಾರಿ ಸಂಚಲನ ಹಾಗೂ ನಿರೀಕ್ಷೆ ಹುಟ್ಟಿಸಿದ ‘ಬಘೀರ’ ಸಿನಿಮಾದ ಟ್ರೈಲರ್ ಇಂದು ಬಿಡುಗಡೆಯಾಗಿದೆ. ರೋರಿಂಗ್ ಸ್ಟಾರ್ ಶ್ರೀ ಮುರಳಿ ಎರಡುವರೆ ನಿಮಿಷಗಳ ಈ ಟ್ರೈಲರ್ ನಲ್ಲಿ ತಮ್ಮ ನಿರ್ದಯತೆಯ ಉತ್ಕೃಷ್ಟ ಮಟ್ಟವನ್ನು ತೋರಿಸಿದ್ದಾರೆ. ಚಿತ್ರದ ಈ ತುಣುಕುಗಳು ಚಿತ್ರ ರಸಿಕರ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.
ರಾಕ್ಷಸ ರೂಪದ ದೇವರು:
“ದೇವರು ರಾಕ್ಷಸನಾಗಿಯೂ ಬರಬಹುದು”, ಟ್ರೈಲರ್ ಪ್ರಾರಂಭವಾದಾಗ ಬರುವ ಈ ಡೈಲಾಗ್, ರಂಗಮಂದಿರದಲ್ಲಿ ಅಭಿಮಾನಿಗಳ ಮೈನವಿರೇಳಿಸುವುದಂತೂ ನಿಜ. ಈ ಚಿತ್ರಕ್ಕೆ ಶಿಳ್ಳೆ ಮತ್ತು ಚಪ್ಪಾಳೆಗೆ ಕಡಿಮೆ ಇರುವುದಿಲ್ಲ ಎಂದು ಹೇಳಬಹುದು.
ಚಿತ್ರ ಬಿಡುಗಡೆ:
ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದ್ದು, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಥಿಯೇಟರ್‌ಗೆ ಲಗ್ಗೆ ಇಡುತ್ತಿದೆ. ಅಕ್ಟೋಬರ್ 31ಕ್ಕೆ ಚಿತ್ರ ಬಿಡುಗಡೆ ಎಂದು ಚಿತ್ರ ತಂಡ ಹೇಳಿದೆ. ದೀಪಾವಳಿಯ ಸಂತಸದ ಸಮಯವನ್ನು ಈ ಚಿತ್ರ ದುಪ್ಪಟ್ಟು ಮಾಡಲಿದೆ ಎಂಬ ಎಲ್ಲಾ ಲಕ್ಷಣಗಳು ಕಾಣುತ್ತಿದೆ.
ತಾರಾಬಳಗ ಮತ್ತು ತಾಂತ್ರಿಕ ತಂಡ:
ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡಿದ, ಡಾಕ್ಟರ್ ಸೂರಿ ನಿರ್ದೇಶನದ ಈ ಚಿತ್ರಕ್ಕೆ, ಚೇತನ್ ಡಿಸೋಜ ಸಾಹಸ ನಿರ್ದೇಶನ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ರೋಮಾಂಚನ ಸೃಷ್ಟಿಸಲಿದೆ.
ಇದರೊಂದಿಗೆ ಬೃಹತ್ ತಾರಾಬಳಗ ಕೂಡ ಈ ಚಿತ್ರದಲ್ಲಿದೆ. ರುಕ್ಮಿಣಿ ವಸಂತ್, ಪ್ರಕಾಶ್ ರಾಜ್, ರಂಗಾಯಣ ರಘು, ಅಚ್ಯುತ್ ಕುಮಾರ್, ಗರುಡ ರಾಮ್ ಹಾಗೂ ಸುಧಾರಾಣಿ ಚಿತ್ರದ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.
ಕನ್ನಡದ ಟಾಪ್ ನಿರ್ದೇಶಕ ಪ್ರಶಾಂತ್ ನೀಲ್ ಬರೆದಿರುವ ಈ ಚಿತ್ರದ ಕಥೆ ಜನರನ್ನು ಎಷ್ಟು ತಲುಪಲಿದೆ ಎಂಬುದಕ್ಕೆ ಉತ್ತರ ಅಕ್ಟೋಬರ್ 31ಕ್ಕೆ ಸಿಗಲಿದೆ.