
ಬೆಂಗಳೂರು: ಕರ್ನಾಟಕ ಸರ್ಕಾರವು ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ಗಾಳಿಪಟ ಹಾರಿಸಲು ಬಳಸುವ ಗಾಜು ಲೇಪಿತ ಮಂಜಾ ದಾರದ ಬಳಕೆಯನ್ನು ನಿಷೇಧಿಸಿರುವ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಗಾಜಿನ ಮಂಜಾ ದಾರವು ಹರಿತವಾಗಿರುತ್ತದೆ. ಇದರಿಂದ ಜನರಿಗೆ ಮತ್ತು ಪಕ್ಷಿಗಳಿಗೆ ಅಪಾಯವನ್ನುಂಟುಮಾಡುತ್ತಿದೆ.
ಸರ್ಕಾರದ ಅಧಿಕೃತ ಹೇಳಿಕೆಯ ಪ್ರಕಾರ, ಗಾಜಿನ ಮಂಜಾ ದಾರದ ಬಳಕೆಯಿಂದ ಜನರು ಮತ್ತು ಪ್ರಾಣಿಗಳಿಗೆ ಗಂಭೀರ ಗಾಯಗಳಾಗಿದ್ದು, ಈ ಮೂಲಕ ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸುತ್ತಿದೆ. ಪರಿಸರ ತಜ್ಞರು ಮತ್ತು ಆರೋಗ್ಯ ತಜ್ಞರಿಂದ ಈ ದಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಜನರ ಸುರಕ್ಷತೆಗೆ ಹೆಚ್ಚುವರಿ ತುರ್ತು ಕ್ರಮಗಳ ಅಗತ್ಯತೆಯ ಕುರಿತು ಒತ್ತಾಯಿಸಿದ ಪರಿಣಾಮ ಈ ನಿರ್ಧಾರ ಕೈಗೊಳ್ಳಲಾಗಿದೆ.
ಗಾಜಿನ ಮಂಜಾ ದಾರದ ಉತ್ಪಾದನೆ, ಮಾರಾಟ ಮತ್ತು ಬಳಕೆ ವಿರುದ್ಧ ಸರ್ಕಾರವು ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದು, ನಿಷೇಧ ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಶಿಕ್ಷೆ ವಿಧಿಸುವ ಎಚ್ಚರಿಕೆ ನೀಡಿದೆ. ಇದರಿಂದ ಸಾರ್ವಜನಿಕರು ಮತ್ತು ಪರಿಸರ ಪ್ರೇಮಿಗಳು ಸರ್ಕಾರದ ಈ ಕ್ರಮವನ್ನು ಸ್ವಾಗತಿಸುತ್ತಿದ್ದಾರೆ.