ಢಾಕಾ: ಭಾರತದ ವಿರುದ್ಧ ಬಾಂಗ್ಲಾದೇಶದ ವಿರೋಧ ಪಕ್ಷಗಳು ಹಮ್ಮಿಕೊಂಡಿರುವ ‘ಬಾಯ್ಕಾಟ್ ಇಂಡಿಯಾ’ ಅಭಿಯಾನದ ವಿರುದ್ಧ ಬಾಂಗ್ಲಾದೇಶದ ಪ್ರಧಾನಿಯಾದ ಶ್ರೀಮತಿ. ಶೇಖ್ ಹಸೀನಾ ಅವರು ವಾಗ್ದಾಳಿ ನಡೆಸಿದ್ದಾರೆ.
ಭಾರತವು ಬಾಂಗ್ಲಾದೇಶದ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಸರ್ಕಾರ ಕೈಗೊಳ್ಳುವ ಯೋಜನೆಗಳಲ್ಲಿ ಭಾರತದ ಪ್ರಭಾವ ಇರುತ್ತದೆ. ಹಾಗಾಗಿ, ಭಾರತವನ್ನು ಹೊರಗಟ್ಟಬೇಕು ಎಂದು ಬಾಂಗ್ಲಾದೇಶದ ವಿರೋಧಪಕ್ಷಗಳು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.
“ಬಿಎನ್‌ಪಿ ನಾಯಕರು ಭಾರತದ ಉತ್ಪನ್ನಗಳನ್ನು ಬಾಯ್ಕಾಟ್ ಮಾಡಲು ಬೆಂಬಲಿಸುತ್ತಿದ್ದಾರೆ. ಪ್ರತಿಭಟನಾಕಾರರಲ್ಲಿ ಎಷ್ಟು ಜನರ ಹೆಂಡಂದಿರು ಭಾರತೀಯ ಸೀರೆಗಳನ್ನು ಹೊಂದಿದ್ದಾರೆ? ಅವರು ಯಾಕೆ ಅವರ ಹೆಂಡಂದಿರ ಸೀರೆಗಳನ್ನು ಸುಡಬಾರದು?” ಎಂದು ಕೊಂಕು ಮಾತುಗಳಿಂದ ವಿರೋಧಪಕ್ಷವನ್ನು ಕುಟುಕಿದ್ದಾರೆ.
“ಹಾಗೆಯೇ, ವಿರೋಧ ಪಕ್ಷಗಳು ಭಾರತದ ಮಸಾಲಾ ಪದಾರ್ಥಗಳನ್ನು ತ್ಯಜಿಸಿ, ಹಾಗೆಯೇ ಊಟ ಮಾಡಬೇಕು. ಭಾರತದ ಜೊತೆಗಿನ ಒಳ್ಳೆಯ ಸಂಬಂಧದಿಂದಾಗಿ ಬಾಂಗ್ಲಾದೇಶ ಎಲ್ಲಾ ರೀತಿಯ ಲಾಭ ಪಡೆದಿದೆ, ಇದರಿಂದ ಭಾರತವನ್ನು ವಿರೋಧಿಸುವುದು ಸರಿಯಲ್ಲ.” ಎಂದು ಹೇಳಿದರು.