Alma Corner

ಕಾಂಗ್ರೆಸ್‌ ಕಾರ್ಯಕರ್ತರಿಗೆ ಭಿಕ್ಷೆ ಬೇಡಿ ಹಣ ಕೊಡಿ !

ಸದನದಲ್ಲಿ ವಿಪಕ್ಷ ನಾಯಕ ಆರ್‌.ಅಶೋಕ್‌ ಆಕ್ರೋಶ..!

ಬೆಂಗಳೂರು: “ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗೆ ಪಕ್ಷದ ಕಾರ್ಯಕರ್ತರನ್ನು ನೇಮಕ ಮಾಡಿಕೊಳ್ಳುವುದು ಮತ್ತು ಅವರಿಗೆ ಗೌರವ ಧನ ನೀಡಲು ನಿರ್ಧರಿಸಿದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆರ್‌. ಅಶೋಕ್‌ ಕಿಡಿಕಾರಿದರು. ಜನರು ಕಟ್ಟಿದ ತೆರಿಗೆ ಹಣವನ್ನು ಪಕ್ಷಕ್ಕೆ ಬಳಕೆ ಮಾಡುವುದು ಸರಿಯಲ್ಲ. ಕಾಂಗ್ರೆಸ್‌ ಸರ್ಕಾರ ಕಾರ್ಯಕರ್ತರಿಗೆ ಹಣ ನೀಡಬೇಕೆಂದಾದರೆ ಪಕ್ಷದ ನಾಯಕರು ಭಿಕ್ಷೆ ಬೇಡಿ ಹಣ ನೀಡಲಿ, ಸರ್ಕಾರದ ಖಜಾನೆಯಿಂದ ಹಣ ನೀಡಬಾರದು. ಯಾವುದೇ ಮುಖ್ಯಮಂತ್ರಿಯೂ ತಮ್ಮ ಪಕ್ಷದ ಕಾರ್ಯಕರ್ತರಿಗೆ ಸರ್ಕಾರದ ಖಜಾನೆಯಿಂದ ಹಣ ಕೊಡುವ ಇಂತಹ ಮನೆ ಹಾಳು ಕೆಲಸ ಮಾಡಿಲ್ಲ‌” ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

ಈ ವಿಷಯದ ಕುರಿತು ಜೆಡಿಎಸ್‌ ಪಕ್ಷದ ಎಂ.ಟಿ ಕೃಷ್ಣಪ್ಪ ಸದನದಲ್ಲಿ ಪ್ರಸ್ತಾಪಿಸಿದ ಕೂಡಲೇ ಬಿಜೆಪಿ-ಜೆಡಿಎಸ್‌ ಮಿತ್ರಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದರು. ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಗೆ ಸದಸ್ಯರ ಬದಲು ಶಾಸಕರನ್ನು ನೇಮಿಸಬೇಕು.

ಜಿಲ್ಲಾ ಮತ್ತು ತಾಲ್ಲೋಕೂ ಕೇಂದ್ರದಲ್ಲಿ ಶಾಸಕರೇ ಸುಪ್ರೀಂ. ಅವರನ್ನು ಸಮಿತಿಗೆ ನೇಮಕ ಮಾಡಬೇಕು, ಕಾರ್ಯಕರ್ತರನ್ನು ಸದಸ್ಯರಾಗಿ ನೇಮಿಸಬೇಕು. ಪಕ್ಷದ ಕಾರ್ಯಕರ್ತರನ್ನು ಸಮಿತಿಗೆ ನೇಮಕ ಮಾಡಿ ವರ್ಷಕ್ಕೆ 15 ರಿಂದ 20 ಕೋಟಿ ನೀಡುವುದು ಸರಿ ಅಲ್ಲ, ಕಾಂಗ್ರೆಸ್‌ ಸರ್ಕಾರ ಕಾರ್ಯಕರ್ತರಿಗೆ ಹಣ ನೀಡಬೇಕೆಂದಾದರೆ ಪಕ್ಷದ ನಾಯಕರು ಕಬ್ಬನ್‌ ಪಾರ್ಕ್‌ನಲ್ಲಿ ಭಿಕ್ಷೆ ಬೇಡಿ ನೀಡಲಿ ಜನರು ಕಟ್ಟಿದ ತೆರಿಗೆ ಹಣದಿಂದ ಪಕ್ಷದ ಕಾರ್ಯಕರ್ತರಿಗೆ ಹಣ ಕೊಡಬಾರದು ಎಂದು ಗದ್ದಲ ಮಾಡಿದರು.

ಮಧ್ಯಪ್ರವೇಶಿಸಿದ ಡಿಸಿಎಂ ಡಿಕೆ ಶಿವಕುಮಾರ್ “ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರಲು ಪಕ್ಷದ ಕಾರ್ಯಕರ್ತರು ಕಾರಣ ಹಾಗಾಗಿ ಅವರಿಗೆ ಹುದ್ದೆ ನೀಡುವ ಅಧಿಕಾರ ನಮಗಿದೆ. ಕಾಂಗ್ರೆಸ್‌ ಸರ್ಕಾರದ ಗ್ಯಾರೆಂಟಿ ಯೋಜನೆಗಳನ್ನು ನೋಡಿ ನಿಮಗೆ ಸಹಿಸಲು ಅಗುತ್ತಿಲ್ಲ ಎಂದು ತಿರುಗೇಟು ನೀಡಿದರು”. ಆಗ ವಿರೋಧ ಪಕ್ಷ ಮತ್ತು ಆಡಳಿತ ಪಕ್ಷಗಳ ಮಧ್ಯೆ ಮಾತಿನ ಯುದ್ಧವೆ ನಡೆಯಿತು.

“ವಿರೋಧ ಪಕ್ಷಗಳ ನಿಲುವಿನಂತೆ ಸಚಿವ ಸಂಪುಟ ಸಭೆಯಲ್ಲಿ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕುರಿತು ಚರ್ಚಿಸಿ ನಿರ್ಧಾರವನ್ನು ಕೈಗೊಳಲಾಗುವುದು” ಎಂದು ಡಿಕೆಶಿ ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿ ಪಕ್ಷಗಳು ಸದನದ ಬಾವಿಗೆ ಇಳಿದು ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗೃಹ ಸಚಿವ ಜಿ ಪರಮೇಶ್ವರ್‌ “ಈ ವಿಷಯದ ಕುರಿತು ನಾವು ಸಚಿವ ಸಂಪುಟದಲ್ಲಿ ನಿರ್ಧಾರವನ್ನು ತೆಗುದುಕೊಳ್ಳುತ್ತೇವೆ” ಎಂದು ಹೇಳಿದಾಗ ಮಧ್ಯಪ್ರವೇಶಿಸಿದ ಆರ್‌.ಅಶೋಕ್‌ “ಇದೇ ವಾರ ನಡೆಯುವ ಸಂಪುಟದಲ್ಲಿ ನಿರ್ಧಾರ ಕೈಗೊಳಲಾಗುತ್ತದೆಯೆ”? ಎಂದು ಕೇಳಿದಾಗ “ಸಚಿವ ಸಂಪುಟದಲ್ಲಿ ಚರ್ಚಿಸಲಾಗುವುದು ಆದರೆ ನಿರ್ಧಾರ ಏನೆಂದು ಹೇಳಲು ಈಗಲೆ ಸಾಧ್ಯವಿಲ್ಲ” ಎಂದು ಉತ್ತರಿಸಿದಾಗ ವಿಪಕ್ಷಗಳು ತಮ್ಮ ಪಟ್ಟು ಬಿಡದೆ ಧರಣಿಯನ್ನು ಮುಂದುವರಿಸಿದರು.

ಎರಡು ಪಕ್ಷಗಳ ಮಾತಿನ ಯುದ್ಧದಿಂದ ಸಭಾಧ್ಯಕ್ಷರು ಸದನದ ಕಲಾಪವನ್ನು 3 ಬಾರಿ ಮುಂದುಡಿದರು. ಸಭಾಧ್ಯಕ್ಷ ಯು.ಟಿ ಖಾದರ್‌ ಆಡಳಿತ ಮತ್ತು ಪ್ರತಿಪಕ್ಷಗಳೊಂದಿಗೆ ಸಂಧಾನ ಸಭೆ ನಡೆಸಿದರು ವಿಫಲವಾಯಿತು. ಸದನವನ್ನು ಬುಧವಾರಕ್ಕೆ ಮುಂದುಡಿದರು. ಈ ಎಲ್ಲಾ ಗದ್ದಲದ ಮಧ್ಯೆ ಕೇವಲ ಒಂದು ವಿಧೇಯಕ ಮಾತ್ರ ಮಂಡನೆಯಾಯಿತು. ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯ ತಿದ್ದುಪಡಿ 2025 ವಿಧೇಯಕವನ್ನು ಮಂಡಿಸಿದರು.

Show More

Related Articles

Leave a Reply

Your email address will not be published. Required fields are marked *

Back to top button