ಬೆಂಗಳೂರು: ನಗರದ ನಗರ್ತರ ಪೇಟೆಯಲ್ಲಿರುವ ಮುಖೇಶ್ ಎಂಬ ಯುವಕನ ಅಂಗಡಿಯಲ್ಲಿ ಹನುಮಾನ್ ಚಾಲೀಸಾ ಮಂತ್ರ ಹಾಕಿದ್ದಕ್ಕಾಗಿ ಸ್ಥಳೀಯ ಅನ್ಯ ಕೋಮಿನ ಯುವಕರು ಆತನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಸುದ್ದಿ ರಾಜ್ಯದಲ್ಲಿ ಹರಿದಾಡಿತ್ತು. ಇದಕ್ಕೆ ಸಂಬಂಧಪಟ್ಟ ಸಿಸಿಟಿವಿ ಚಿತ್ರಾವಳಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ಘಟನೆಯನ್ನು ವಿರೋಧಿಸಿದ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಅನೇಕ ಹಿಂದೂ ಸಂಘಟನೆಗಳು ಇಂದು ಬೆಂಗಳೂರಿನ ನಗರ್ತರ ಪೇಟೆಯಲ್ಲಿ ‘ಹನುಮಾನ್ ಚಾಲೀಸಾ’ ಮೆರವಣಿಗೆಯನ್ನು ಹಮ್ಮಿಕೊಂಡಿದ್ದರು.
ಮೆರವಣಿಗೆ ವೇಳೆ ಅಂಗಡಿಯ ಮಾಲೀಕರು, ತಮ್ಮ ಅಂಗಡಿಗಳನ್ನು ಮುಚ್ಚಿ ಹನುಮಾನ್ ಚಾಲೀಸಾ ಪಠಣೆಯನ್ನು ಮಾಡಿದರು. ಹಾಗೆ ‘ಜೈ ಶ್ರೀ ರಾಮ್’ ಘೋಷಣೆ ಕೂಡ ಕೇಳಿ ಬಂತು. ಈ ಮೆರವಣಿಗೆಯ ತೀವ್ರತೆಯನ್ನು ಗಮನಿಸಿದ ಪೊಲೀಸರು, ಇದರಲ್ಲಿ ಭಾಗವಹಿಸಿದ್ದ ಸಂಸದರಾದ ಶೋಭಾ ಕರಂದ್ಲಾಜೆ, ಶಾಸಕರಾದ ಸುರೇಶ್ ಕುಮಾರ್, ಹೀಗೆ ಅನೇಕ ಹಿಂದೂ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.
ಈ ಘಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ ಅಂಗಡಿಯ ಮಾಲೀಕ ಹಾಗೂ ಹಲ್ಲೆಗೆ ಒಳಗಾದಂತಹ ಯುವಕ ಮುಖೇಶ್ ” ಸ್ಥಳೀಯ ಅನ್ಯ ಕೋಮಿನ ಯುವಕರು, ಅಜಾನ್ ವೇಳೆ ಏಕೆ ಹನುಮಾನ್ ಚಾಲೀಸಾ ಹಾಕಿರುವೆ, ಅದನ್ನು ಹಾಕಬೇಡ ಎಂದು ನನ್ನನ್ನು ಥಳಿಸಿದರು. ಅವರು 6 ರಿಂದ 7 ಜನ ಯುವಕರಿದ್ದರು.” ಎಂದು ಹೇಳಿದರು.
ಈ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಈಗಾಗಲೇ 6 ರಲ್ಲಿ 5 ಜನರನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ಕೂಡ ಪೊಲೀಸ ವಲಯದ ಮೂಲಕ ತಿಳಿದು ಬಂದಿದೆ.