ರಣಾಂಗಣಕ್ಕೆ ‘ರಣಗಲ್’: ನವೆಂಬರ್ 15ಕ್ಕೆ ಬಿಡುಗಡೆ ಫಿಕ್ಸ್..!
ಬೆಂಗಳೂರು: ‘ಸೆಂಚುರಿ ಸ್ಟಾರ್’ ಶಿವರಾಜ್‌ಕುಮಾರ್ ಅಭಿನಯದ ಬಹು ನಿರೀಕ್ಷಿತ ‘ಭೈರತಿ ರಣಗಲ್’ ಸಿನಿಮಾ ಸ್ವಾತಂತ್ರ್ಯ ದಿನದಂದು ಕನ್ನಡ ಚಿತ್ರ ಮಂದಿರಗಳಲ್ಲಿ ಬೃಹತ್ ತೆರೆ ಕಾಣಬೇಕಿತ್ತು. ಆದರೆ, ನಟ ಶಿವರಾಜ್‌ಕುಮಾರ್ ಅವರ ಪತ್ನಿ, ಗೀತಾ ಶಿವರಾಜ್‌ಕುಮಾರ್, ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಶ್ರಮಿಸಿದ್ದು, ಆದ್ದರಿಂದ ಚಿತ್ರತಂಡದೊಂದಿಗೆ ಸಮಯ ಹಂಚಿಕೊಳ್ಳಲು ಸಾಧ್ಯವಾಗಲಿಲ್ಲ. ಹಾಗಾಗಿ ಆಗಸ್ಟ್ 15ರಂದು ‘ಕೃಷ್ಣಂ ಪ್ರಣಯ ಸಖಿ’ ಮತ್ತು ‘ಗೌರಿ’ ಎಂಬ ಎರಡು ಕನ್ನಡ ಸಿನಿಮಾಗಳು ಆ ಜಾಗವನ್ನು ಪಡೆದುಕೊಂಡವು.
ಇದರಿಂದ ‘ಭೈರತಿ ರಣಗಲ್’ ರಿಲೀಸ್ ದಿನಾಂಕವನ್ನು ಸೆಪ್ಟೆಂಬರ್ ತಿಂಗಳಿಗೆ ಮುಂದೂಡುವ ಸಾಧ್ಯತೆ ಕಂಡುಬಂದಿತ್ತು. ಆದರೆ, ಇತ್ತೀಚಿನ ವರದಿಗಳು, ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಬಿಡುಗಡೆಗೆ ಚಿತ್ರತಂಡ ಮುಂದಾಗಿದೆ ಎನ್ನಲಾಗಿತ್ತು. ಇದೀಗ, ಚಿತ್ರತಂಡ ಹೊಸ ಪ್ರಕಟಣೆ ತಿಳಿಸಿದ್ದು, ‘ಭೈರತಿ ರಣಗಲ್’ ಸಿನಿಮಾ ನವೆಂಬರ್ 15 ರಂದು ಬಿಡುಗಡೆಗೊಳ್ಳಲಿದೆ ಎಂಬ ಸಿಹಿ ಸುದ್ದಿಯನ್ನು ಅಭಿಮಾನಿಗಳಿಗೆ ನೀಡಿದೆ.
ನವೆಂಬರ್ 18ರಂದು ನಡೆಯುವ ಕನಕದಾಸ ಜಯಂತಿಯ ಪ್ರಯುಕ್ತ ಸಿನಿಮಾ ದೀರ್ಘ ವಾರಾಂತ್ಯದ ಪ್ರಯೋಜನ ಪಡೆಯಲಿರುವ ಸಾಧ್ಯತೆ ಇದೆ.
‘ಭೈರತಿ ರಣಗಲ್’ ಬಗ್ಗೆ ಏನು ವಿಶೇಷ?
‘ಭೈರತಿ ರಣಗಲ್’ ಎಂಬ ಈ ಚಿತ್ರವು 2017ರಲ್ಲಿ ಬಿಡುಗಡೆಯಾದ ‘ಮಫ್ತಿ’ಯ ಪ್ರಮುಖ ಪಾತ್ರವಾದ ಭೈರತಿ ರಣಗಲ್‌ನ ಜೀವನದ ಪ್ರೀಕ್ವೆಲ್ ಆಗಿದ್ದು, ಹೇಗೆ ಒಬ್ಬ ಬಡ ಹುಡುಗ ಗ್ಯಾಂಗ್ಸ್ಟರ್ ಆಗಿ ಪರಿವರ್ತನೆ ಆಗುತ್ತಾನೆ ಎಂಬುದನ್ನು ಚಿತ್ರಿಸುತ್ತದೆ. ‘ಮಫ್ತಿ’ನಲ್ಲಿ, ಶ್ರೀಮುರಳಿ ‘ಗಣ’ ಎಂಬ ಗುಪ್ತಚರ ಪೋಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದರು. ಭೈರತಿ ರಣಗಲ್‌ನ ಗ್ಯಾಂಗ್ನಲ್ಲಿ ಸೇರಿ ಅವನ ವಿರುದ್ದ ಸಾಕ್ಷ್ಯ ಸಂಗ್ರಹಿಸುತ್ತಾ, ರಣಗಲ್‌ನ ಒಳ್ಳೆಯ ಮುಖದ ಪರಿಚಯ ಪಡೆಯುವ ಕಥೆ ಅದಾಗಿತ್ತು.
ಈ ಹೊಸ ಚಿತ್ರದಲ್ಲಿ, ಶಿವರಾಜ್‌ಕುಮಾರ್‌ಗೆ ರುಕ್ಮಿಣಿ ವಸಂತ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ, ಮತ್ತು ಮುಖ್ಯ ಪಾತ್ರದಲ್ಲಿ ಬಾಲಿವುಡ್ ನಟ ರಾಹುಲ್ ಬೋಸ್ ಅಭಿನಯಿಸಿದ್ದಾರೆ.