ಬಿಗ್‌ಬಾಸ್ ಕನ್ನಡ ಸೀಸನ್ 11: ಸೆ. 29ರಂದು ಗ್ರ್ಯಾಂಡ್ ಓಪನಿಂಗ್, ಈ ಬಾರಿ ಏನಿರಲಿದೆ ವಿಶೇಷ?!
ಬೆಂಗಳೂರು: ಬಿಗ್‌ಬಾಸ್ ಕನ್ನಡ ಸೀಸನ್ 11ರ ಅದ್ದೂರಿ ಗ್ರ್ಯಾಂಡ್ ಓಪನಿಂಗ್‌ಗೆ ದಿನಗಣನೆ ಆರಂಭವಾಗಿದೆ. ಸೆಪ್ಟೆಂಬರ್ 29 ರಂದು ಸಂಜೆ 6 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಹೊಸ ಅಧ್ಯಾಯ ಆರಂಭಗೊಳ್ಳಲಿದೆ. ಬಿಗ್‌ಬಾಸ್ ಶೋನ ಸೂತ್ರಧಾರ ಕಿಚ್ಚ ಸುದೀಪ್ ಮತ್ತೊಮ್ಮೆ ಈ ಕಾರ್ಯಕ್ರಮವನ್ನು ಮುನ್ನಡೆಸಲಿದ್ದಾರೆ.
ಈ ಬಾರಿ ಬಿಗ್‌ಬಾಸ್ ಸೀಸನ್ 11 ಸ್ವರ್ಗ-ನರಕ (ಹೆವನ್-ಹೆಲ್) ಹೊಸ ಕಾನ್ಸೆಪ್ಟ್‌ನೊಂದಿಗೆ ಬರುತ್ತಿದ್ದು, ಸ್ಪರ್ಧಿಗಳು ಸವಾಲಿನ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಶೋ ಆರಂಭದ ಮುನ್ನ, “ರಾಜಾರಾಣಿ” ಫಿನಾಲೆಯಲ್ಲಿ ಕೆಲವು ಸ್ಪರ್ಧಿಗಳನ್ನು ಪರಿಚಯಿಸಲಾಗುವುದು. ವೀಕ್ಷಕರ ಮತದಾನದ ಮೂಲಕ ಆಯ್ಕೆಯಾದ ಸ್ಪರ್ಧಿಗಳು, ಗ್ರ್ಯಾಂಡ್ ಓಪನಿಂಗ್‌ನಲ್ಲಿ ಬಿಗ್‌ಬಾಸ್ ಮನೆಗೆ ಪ್ರವೇಶಿಸಲಿದ್ದಾರೆ.
ಕಿಚ್ಚ ಸುದೀಪ್ ಶೋನ ನಿರೂಪಕರಾಗಿ ಬದಲಾವಣೆಯಾಗಬಹುದು ಎಂಬ ವದಂತಿಗೆ ತಣ್ಣೀರು ಸುರಿಯಲಾಗಿದೆ. ಹತ್ತು ವರ್ಷಗಳಿಂದ ಶೋ ನಿರೂಪಿಸುತ್ತಿರುವ ಸುದೀಪ್ ಅವರು, ಈ ಬಾರಿ ನಿರೂಪಣೆ ಕೈ ಬಿಡುವ ಯೋಚನೆ ಮಾಡಿದ್ದರು. ಆದರೆ, ಹಲವಾರು ಮಾತುಕತೆಗಳ ನಂತರ ಅವರು ಮತ್ತೆ ಶೋನಲ್ಲಿ ಭಾಗಿಯಾಗಲು ಒಪ್ಪಿದ್ದಾರೆ.