2024ರ ಲೋಕಸಭಾ ಚುನಾವಣೆಗೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ. ಕೆಲವೇ ತಿಂಗಳುಗಳು ಇರುವ ಲೋಕಸಭೆ ಚುನಾವಣೆಗೆ ಕೇಂದ್ರದಲ್ಲಿ ಚುಕ್ಕಾಣಿ ಹಿಡಿದಂತ ಬಿಜೆಪಿ ಪಕ್ಷ, ಕರ್ನಾಟಕ ರಾಜ್ಯದ ತನ್ನ ಅಭ್ಯರ್ಥಿ ಪಟ್ಟಿಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ. ಈ ಪಟ್ಟಿಯಲ್ಲಿ ಯಾವ ಹಾಲಿ ಸಂಸದರು ಉಳಿಯಲಿದ್ದಾರೆ? ಯಾವ ಹಾಲಿ ಸಂಸದರು ತಮ್ಮ ಕ್ಷೇತ್ರಗಳನ್ನು ಕಳೆದುಕೊಳ್ಳಲಿದ್ದಾರೆ? ಎಂಬ ಬಗ್ಗೆ ಊಹಾಪೋಹಗಳು ಹುಟ್ಟುಕೊಳ್ಳುತ್ತಿದೆ.
ಕರ್ನಾಟಕದ 5 ಲೋಕಸಭಾ ಕ್ಷೇತ್ರಗಳಲ್ಲಿ ಹಾಲಿ ಸಂಸದರನ್ನು ಬಿಜೆಪಿ ಬದಲಾಯಿಸಬಹುದು ಎಂದು ಅಂದಾಜಿಸಲಾಗಿದೆ. ಅವರುಗಳೆಂದರೆ, ಭಗವಂತ ಖೂಬಾ (ಬೀದರ್ ಲೋಕಸಭಾ ಕ್ಷೇತ್ರ), ಜಿ.ಎಂ. ಸಿದ್ದೇಶ್ವರ್ (ದಾವಣಗೆರೆ ಲೋಕಸಭಾ ಕ್ಷೇತ್ರ), ರಮೇಶ್ ಜಿಣಜಣಗಿ (ವಿಜಯಪುರ ಲೋಕಸಭಾ ಕ್ಷೇತ್ರ), ಮಂಗಲ ಅಂಗಡಿ (ಬೆಳಗಾವಿ ಲೋಕಸಭಾ ಕ್ಷೇತ್ರ), ಮತ್ತು ಡಿ. ವಿ. ಸದಾನಂದ ಗೌಡ (ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ).
ಅಷ್ಟೇ ಅಲ್ಲದೆ ಕರ್ನಾಟಕ ರಾಜ್ಯದ ಎರಡು ಮಾಜಿ ಮುಖ್ಯಮಂತ್ರಿಗಳಿಗೆ ಈ ಬಾರಿಯ ಲೋಕಸಭಾ ಟಿಕೆಟ್ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಬಹುಶಃ, ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಜಗದೀಶ್ ಶೆಟ್ಟರ್ ಅವರನ್ನು, ಹಾಗೆಯೇ, ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಬಸವರಾಜ್ ಬೊಮ್ಮಾಯಿ ಅವರನ್ನು ಬಿಜೆಪಿ ತನ್ನ ಅಭ್ಯರ್ಥಿಗಳನ್ನಾಗಿ ನಿಲ್ಲಿಸಲಿದೆ ಎಂಬ ಊಹೆಯೂ ಇದೆ.
ಇದರೊಂದಿಗೆ ಕೆಲವು ಹಾಲಿ ಸಂಸದರ ಸ್ಪರ್ಧೆಗೆ ವಿರೋಧವೂ ಕೂಡ ವ್ಯಕ್ತವಾಗಿದೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಹಾಲಿ ಸಂಸದರಾದ ಅನಂತ್ ಕುಮಾರ್ ಹೆಗಡೆ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ನಳಿನ್ ಕುಮಾರ್ ಕಟೀಲ್, ಬಾಗಲಕೋಟೆ ಲೋಕಸಭಾ ಕ್ಷೇತ್ರದ ಪಿ.ಸಿ. ಗದ್ದಿಗೌಡರ್, ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಗಣ್ಣ ಕರಡಿ, ದಾವಣಗೆರೆ ಲೋಕಸಭಾ ಕ್ಷೇತ್ರದ ಜಿ.ಎಂ. ಸಿದ್ದೇಶ್ವರ್, ಮತ್ತು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಎ. ನಾರಾಯಣಸ್ವಾಮಿ. ಇವರುಗಳೇ, ಸ್ಪರ್ಧೆಗೆ ವಿರೋಧವನ್ನು ಹೊಂದಿರುವ ಹಾಲಿ ಸಂಸದರಾಗಿದ್ದಾರೆ.
ಕೇವಲ ಕೆಲವು ತಿಂಗಳುಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ತನ್ನ ಇತರ ಮೈತ್ರಿ ಪಕ್ಷಗಳೊಂದಿಗೆ ವಿವಿಧ ಸಭೆಗಳನ್ನು ನಡೆಸುತ್ತಿದೆ. ಹಾಗೆ ಇನ್ನು ಕೆಲವೇ ದಿನಗಳಲ್ಲಿ ಬಿಜೆಪಿಯು ತನ್ನ ಮೊದಲ ಅಭ್ಯರ್ಥಿ ಪಟ್ಟಿಯನ್ನು ಬಿಡುಗಡೆ ಮಾಡಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.