ಗೌರಿ ಲಂಕೇಶ್ ಹತ್ಯೆ ಆರೋಪಿ ನವೀನ್ ಕುಮಾರ್ ಭೇಟಿಯಾದ ಬಿಜೆಪಿ ನಾಯಕ ಪ್ರತಾಪ್ ಸಿಂಹ.
ಬೆಂಗಳೂರು: ಇತ್ತೀಚೆಗೆ ಜಾಮೀನಿನಲ್ಲಿ ಬಿಡುಗಡೆಯಾದ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನವೀನ್ ಕುಮಾರ್ ಅನ್ನು ಬಿಜೆಪಿ ನಾಯಕ ಮತ್ತು ಮಾಜಿ ಸಂಸದ ಪ್ರತಾಪ್ ಸಿಂಹ ಭೇಟಿಯಾದ ಸುದ್ದಿ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಭೇಟಿಯ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಪ್ರತಾಪ್ ಸಿಂಹ, ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, “ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಆರೋಪಿ ನಂ-1 ಆಗಿ ನಂತರ A-17 ಆಗಿ, ಆರೂವರೆ ವರ್ಷ ಜೈಲಿನಲ್ಲಿದ್ದು ಇತ್ತೀಚೆಗೆ ಜಾಮೀನಿನಲ್ಲಿ ಹೊರಬಂದಿರುವ ಸ್ನೇಹಿತ ಮದ್ದೂರು ನವೀನ್ ರನ್ನ ಭೇಟಿಯಾಗಿ ಅರೋಗ್ಯ ವಿಚಾರಿಸಿದೆ” ಎಂದು ಬರೆದಿದ್ದಾರೆ.
ಈ ಪೋಸ್ಟ್ ತಕ್ಷಣವೇ ವ್ಯಾಪಕ ಆಕ್ರೋಶವನ್ನು ಹುಟ್ಟಿಸಿದ್ದು, ಹಲವರು ಪ್ರತಾಪ್ ಸಿಂಹನ ಈ ನಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಈ ಬಗ್ಗೆ ಪ್ರತಿಕ್ರಿಯಿಸಿ, “ಗೌರಿ ಲಂಕೇಶ್ ಹತ್ಯೆಯ ಆರೋಪಿ ನವೀನ್ ಕುಮಾರ್ ಅವರನ್ನು ತಮ್ಮ ಗೆಳೆಯ ಎಂದು ಕರೆಯುವ ಮೂಲಕ ಪ್ರತಾಪ್ ಸಿಂಹ ಬಿಜೆಪಿ ಪಕ್ಷದ ಅಸಲಿ ಮುಖವನ್ನು ತೋರಿಸುತ್ತಿದ್ದಾರೆ. ಇದು ಬಿಜೆಪಿಯವರ ಗರ್ಭಗುಡಿಯಲ್ಲಿರುವವರ ವಾಸ್ತವಿಕತೆ” ಎಂದು ಟೀಕಿಸಿದ್ದಾರೆ.
“ನಿಷ್ಕಾರಣವಾಗಿ ಹತ್ಯೆಗೀಡಾದ ಗೌರಿ ಲಂಕೇಶ್‌ರವರ ಆರೋಪಿಯನ್ನು ಬೆಂಬಲಿಸುವ ಬದಲು, ಅವರೊಂದಿಗೆ ಫೋಟೋ ತೆಗೆಸಿಕೊಂಡು, ಸಮಾಜಕ್ಕೆ ಕಳುಹಿಸುತ್ತಿರುವ ಸಂದೇಶವನ್ನು ಗಮನಿಸುವ ಅಗತ್ಯವಿದೆ” ಎಂದು ಗುಂಡೂರಾವ್ ಪ್ರಶ್ನಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಕುರಿತು ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, “ಅಶಾಂತಿ ಮತ್ತು ಹಿಂಸೆಗೆ ಉತ್ತೇಜನ ನೀಡುವವರನ್ನು ಬೆಂಬಲಿಸುವುದು ಎಷ್ಟರ ಮಟ್ಟಿಗೆ ನ್ಯಾಯ?” ಎಂದು ಪ್ರಶ್ನಿಸಿದ್ದಾರೆ.