1984ರಲ್ಲಿ ಒಟ್ಟು 541 ಸ್ಥಾನಗಳಲ್ಲಿ ಕೇವಲ 2 ಸ್ಥಾನಗಳನ್ನು ಗೆಲ್ಲಲು ಶಕ್ತವಾಗಿದ್ದ ಭಾರತೀಯ ಜನತಾ ಪಕ್ಷ, 2024ರ ಲೋಕಸಭಾ ಚುನಾವಣೆಯಲ್ಲಿ 545 ಸ್ಥಾನಗಳಲ್ಲಿ ನಾವು 400ಕ್ಕೂ ಹೆಚ್ಚು ಸ್ಥಾನವನ್ನು ಗೆಲ್ಲಲಿದ್ದೇವೆ ಎಂಬ ಆತ್ಮವಿಶ್ವಾಸ ತೋರಿಸಿದೆ.
ಇಂದು ಸದನವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳಿಗೆ ವಂದನಾ ನಿರ್ಣಯವನ್ನು ಸಲ್ಲಿಸುವ ಸಂದರ್ಭದಲ್ಲಿ, ಪ್ರಧಾನಿ ಮೋದಿಯವರು ” ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಒಕ್ಕೂಟವು 400ಕ್ಕೂ ಹೆಚ್ಚು ಸ್ಥಾನ ಹಾಗೂ ಬಿಜೆಪಿ ಒಂದೇ 370ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ”. ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಮ್ಮ ಮೂರನೇ ಅವಧಿಯಲ್ಲಿ ಭಾರತವನ್ನು ಮೂರನೇ ಅತಿ ದೊಡ್ಡ ಆರ್ಥಿಕತೆ ಹೊಂದಿದ ದೇಶವನ್ನಾಗಿ ಮಾರ್ಪಾಡು ಮಾಡುತ್ತೇವೆ. ಇದು ಮೋದಿಯ ಗ್ಯಾರಂಟಿ ಎಂದು ಹೇಳಿದ್ದಾರೆ.
‘ಅಬ್ ಕೀ ಬಾರ್, 400 ಬಾರ್’ ಎಂದು ಹೇಳಿರುವ ಪ್ರಧಾನಿ ಮೋದಿಯವರು, ಚುನಾವಣಾ ಅಂಕಣದಲ್ಲಿ ಹೊಸ ದಾಳವನ್ನು ಎಸೆದಿದ್ದಾರೆ. 400 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸ ಮತದಾರರನ್ನು ಬಿಜೆಪಿಯತ್ತ ಸೆಳೆಯುತ್ತದೆ ಎಂಬ ಲೆಕ್ಕಾಚಾರ ಬಿಜೆಪಿ ಪಾಳಯದ್ದು. ಮೊದಿಯನ್ನಷ್ಪೇ ಸೋಲಿಸಬೇಕು ಎಂಬ ಧ್ಯೇಯದೊಂದಿಗೆ ಚುನಾವಣೆಯಲ್ಲಿ ಧುಮುಕಿರುವ ವಿರೋಧ ಪಕ್ಷಗಳು ಮೋದಿ ಗ್ಯಾರಂಟಿಯನ್ನು ಎಷ್ಟು ಗಂಭೀರವಾಗಿ ಪರಿಗಣಿಸಲಿವೆ ಎಂಬುದನ್ನು ಕಾದು ನೋಡಬೇಕಿದೆ.