ಬಿಜೆಪಿ ಪತ್ರಿಕಾಗೋಷ್ಠಿ; ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಆರ್.ಅಶೋಕ್.
ಬೆಂಗಳೂರು: ರಾಜ್ಯ ಸರ್ಕಾರವು ಪ್ರಸ್ತುತ ಹಲವು ಹಗರಣಗಳ ಬಲೆಯಲ್ಲಿ ಸಿಲುಕಿರುವ ಈ ಸಂದರ್ಭದಲ್ಲಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ, ಆರ್.ಅಶೋಕ್ ಅವರು ಇಂದು ಪತ್ರಿಕಾಗೋಷ್ಠಿ ನಡೆಸಿದರು. ಈ ಸಂದರ್ಭದಲ್ಲಿ ಅಶೋಕ್ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸಚಿವರಿಗೆ ಹಾಗೂ ನಿಗಮದ ಅಧ್ಯಕ್ಷರಿಗೆ ಕ್ಲೀನ್ ಚಿಟ್ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಅಶೋಕ್ ಟೀಕೆ ಮಾಡಿದರು.
“ವಾಲ್ಮೀಕಿ ನಿಗಮದ ಹಗರಣದ ಹಣ ವಾಪಸ್ ಬರಲಿದೆ. ಎಸ್‍ಸಿ, ಎಸ್‍ಟಿ ಜನಾಂಗದಲ್ಲಿ ಕಾಯುತ್ತಿದ್ದ ಫಲಾನುಭವಿಗಳಿಗೆ ಪ್ರಯೋಜನ ಲಭಿಸಿದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆ. ದಲಿತರ ಹಣ ಮುಟ್ಟಿದರೆ, ಸರ್ವನಾಶ ಆಗುತ್ತಾರೆ ಎಂಬ ಸರಕಾರದ ಎಚ್ಚರಿಕೆಯ ನಡೆಯನ್ನು ರಾಜ್ಯದ ಜನರು ನಿರೀಕ್ಷೆ ಮಾಡಿದ್ದರು.” ಎಂದು ಆರ್.ಅಶೋಕ್ ಹೇಳಿದರು.
“ಒಬ್ಬರು ಈಗಾಗಲೇ ಜೈಲಲ್ಲಿ ಇದ್ದು, ಇನ್ನೊಬ್ಬರು ಜೈಲಿಗೆ ಹೋಗುವ ಹಂತದಲ್ಲಿದ್ದಾರೆ. ದಲಿತರ ಹಣ ವಾಪಸ್ ಬರಬೇಕು; ಅವರಿಗೆ ಶಿಕ್ಷೆ ಆಗಬೇಕೆಂದು ನಿಲುವಳಿ ತಂದಿದ್ದೆವು. ಕಾಂಗ್ರೆಸ್ಸಿನವರು ಈ ಹಗರಣ ಮುಚ್ಚಿ ಹಾಕುವ ತೀರ್ಮಾನ ನಿನ್ನೆ ಗೊತ್ತಾಗಿದೆ. ನಾಗೇಂದ್ರ ಮತ್ತು ನಿಗಮದ ಅಧ್ಯಕ್ಷ ದದ್ದಲ್ ಪಾತ್ರ ಇಲ್ಲವೇ ಇಲ್ಲ ಎಂಬುದಾಗಿ ಡಿ.ಕೆ.ಶಿವಕುಮಾರ್ ಅವರೂ ಸದನದಲ್ಲೇ ಹೇಳಿದ್ದರು. ಈಗ ಮುಖ್ಯಮಂತ್ರಿಗಳು ಅದನ್ನೇ ಸಮರ್ಥಿಸಿದ್ದಾರೆ. ಹಿಂದೆ ನಾವು ಅಧಿಕಾರದಲ್ಲಿದ್ದಾಗ ಹಗರಣದ ಆರೋಪ ಬಂದರೆ ಅಧಿಕಾರಿಗಳಿಂದ ಆಗಿದೆ ಎಂದರೆ, ಸಿದ್ದರಾಮಯ್ಯನವರು, ನೀವೇನು ಕತ್ತೆ ಕಾಯುತ್ತಿದ್ರಾ ಎನ್ನುತ್ತಿದ್ದರು. ಈಗ ಎಲ್ಲ ಅಧಿಕಾರಿಗಳೇ ಮಾಡೋದಾದ್ರೆ ನೀವೇನು ಕತ್ತೆ ಕಾಯ್ತೀರಾ ಎಂದು ಮುಖ್ಯಮಂತ್ರಿಗಳನ್ನು ಕೇಳಬಯಸುತ್ತೇನೆ.” ಎಂದು ಸರ್ಕಾರವನ್ನು ಟೀಕಿಸಿದರು.
ಈ ಹಗರಣದಿಂದ ಸರಕಾರ ಬೆಚ್ಚಿ ಬಿದ್ದಿದೆ ಎಂದು ನುಡಿದ ಅವರು, ಇದರ ಮೇಲೆ ಮೂಡ ಹಗರಣವೂ ನಡೆದಿದೆ. ಆ ಹಗರಣದಲ್ಲೂ ಸಿಎಂ ಪಾತ್ರ ಇದೆ ಎಂದು ತಿಳಿಸಿದ ಅವರು, ತಾವೆಲ್ಲರೂ ಅಧಿಕಾರಿ ಪದ್ಮನಾಭ್ ಮೇಲೆ ಆರೋಪ ಹೊರಿಸುತ್ತೀರಲ್ಲವೇ? ಒಬ್ಬ ಅಧಿಕಾರಿ ಎಷ್ಟು ನುಂಗಬಹುದು? ಒಂದೈವತ್ತು ಲಕ್ಷವೇ? 187 ಕೋಟಿ ಹಗರಣ ಯಾರ ಆದೇಶದಡಿ ನಡೆದಿದೆ ಎಂದು ಕೇಳಿದರು. ಸವಿವರವಾದ ಪತ್ರಿಕಾ ಹೇಳಿಕೆ ನೀಡಿದ ಇ.ಡಿ. ಮೇಲೆ ಕೇಸ್ ಹಾಕಿ ಎಂದು ಆರ್.ಅಶೋಕ್ ಅವರು ಸವಾಲೆಸೆದರು.