ಬಿಪಿಎಲ್ ಗ್ರೂಪ್ ಸಂಸ್ಥಾಪಕ ಟಿ.ಪಿ.ಜಿ. ನಂಬಿಯಾರ್ ನಿಧನ!
ಬೆಂಗಳೂರು: ಭಾರತೀಯ ಇಲೆಕ್ಟ್ರಾನಿಕ್ ಕ್ಷೇತ್ರದ ಪಿತಾಮಹ ಮತ್ತು ಬಿಪಿಎಲ್ ಕಂಪನಿಯ ಸಂಸ್ಥಾಪಕ ಟಿ.ಪಿ.ಜಿ. (ಟಿ.ಪಿ. ಗೋಪಾಲನ್) ನಂಬಿಯಾರ್ (94) ಅವರು ಗುರುವಾರ ಬೆಳಿಗ್ಗೆ ನಿಧನ ಹೊಂದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿದ್ದಾರೆ. “ಬೆಳಗ್ಗೆ ಸುಮಾರು 10.15ರ ಸುಮಾರಿಗೆ ನಮ್ಮ ಮನೆಯಲ್ಲಿ ಅವರು ನಿಧನ ಹೊಂದಿದರು,” ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಆರೋಗ್ಯ ಸಮಸ್ಯೆಯಿಂದ ಹೋರಾಡುತ್ತಿದ್ದರು ನಂಬಿಯಾರ್. ಇಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ದೊಡ್ಡ ಕೊಡುಗೆ ನೀಡಿದ ಮಹಾಪ್ರತಿಭೆ ಇವರಾಗಿದ್ದಾರೆ. ಟಿ.ಪಿ.ಜಿ. ಎಂದೇ ಖ್ಯಾತರಾಗಿದ್ದ ನಂಬಿಯಾರ್, ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರ ಮಾವ.
ನಂಬಿಯಾರ್ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ‘ಪ್ರಿಯ ಮಿತ್ರ, ಬಿಪಿಎಲ್ ಬ್ರ್ಯಾಂಡ್‌ನ ಸ್ಥಾಪಕ ಟಿ.ಪಿ.ಜಿ. ನಂಬಿಯಾರ್ ಅವರ ಅಗಲಿಕೆಯಿಂದ ದುಃಖಿತನಾಗಿದ್ದೇನೆ. ಇಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಅವರ ಕೊಡುಗೆ ಅಮೂಲ್ಯ ಮತ್ತು ಎಂದೆಂದಿಗೂ ಸ್ಮರಣೀಯವಾಗಿರುತ್ತದೆ. ಅವರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ,’ ಎಂದು ‘ಎಕ್ಸ್’ ನಲ್ಲಿ ಬರೆದುಕೊಂಡಿದ್ದಾರೆ.
ಟಿ.ಪಿ.ಜಿ. ನಂಬಿಯಾರ್ ಅವರು ಬಿಪಿಎಲ್ ಕಂಪನಿಯನ್ನು ಸ್ಥಾಪಿಸಿದ್ದು, ದೇಶದ ತಂತ್ರಜ್ಞಾನ ಪ್ರೇಮಿಗಳ ಮನಸ್ಸುಗಳನ್ನು ಗೆದ್ದ ಸಾಧಕರಾಗಿದ್ದಾರೆ. ಇಂದಿಗೂ ಅವರು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧಿಸಿದ ಸಾಧನೆ, ಯಾರೂ ಮೀರದ ಮಟ್ಟಿಗೆ ಮೆಚ್ಚುಗೆಗೆ ಪಾತ್ರವಾಗಿದೆ.