ನಷ್ಟದಲ್ಲಿ ಜಲಮಂಡಳಿ: “ಆದರೆ ತಕ್ಷಣವೇ ನೀರಿನ ದರ ಏರಿಕೆ ಮಾಡಿಲ್ಲ” ಎಂದ ಸಿಎಂ ಸಿದ್ದರಾಮಯ್ಯ.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಾತನಾಡಿ, ಜಲಮಂಡಳಿಯ ನಷ್ಟದ ಹಿನ್ನೆಲೆಯಲ್ಲಿ, ನೀರಿನ ದರ ಏರಿಕೆ ಕುರಿತು ಚರ್ಚೆ ನಡೆದಿದೆ ಎಂದು ತಿಳಿಸಿದ್ದಾರೆ. ಆದರೆ ತಕ್ಷಣವೇ ದರ ಹೆಚ್ಚಳ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸಿಎಂ ಸಿದ್ದರಾಮಯ್ಯ ಅವರು, “ಹಲವು ವರ್ಷಗಳಿಂದ ನೀರಿನ ದರ ಏರಿಕೆ ಆಗಿಲ್ಲ. ಜಲ ಮಂಡಳಿಯ ನಷ್ಟವನ್ನು ತಡೆಯಲು ನಾವು ದರ ಏರಿಕೆ ಬಗ್ಗೆ ಚರ್ಚೆ ಮಾಡಿದ್ದೇವೆ,” ಎಂದು ವಿವರಿಸಿದರು.
ಬಸ್ ದರ ಏರಿಕೆ ವಿಚಾರದಲ್ಲಿಯೂ ಪ್ರತಿಕ್ರಿಯಿಸಿರುವ ಸಿಎಂ, “ನಾವು ಬಸ್ ದರ ಹೆಚ್ಚಳದ ಕುರಿತು ಯಾರಿಗೆ ಹೇಳಿದ್ದೇವೆ? ನಮಗೆ ಈ ವಿಷಯ ಗೊತ್ತೇ ಇಲ್ಲ” ಎಂದು ಸವಾಲು ಹಾಕಿದರು.
ಕೆಪಿಎಸ್‌ಸಿಯಲ್ಲಿ (KPSC) ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿರುವ ಸಿಎಂ, “ಪರೀಕ್ಷೆ ಮುಂದೂಡಿಕೆ ಕುರಿತು ಕೆಲವು ಜನರು ಮಾತಾಡುತ್ತಿದ್ದಾರೆ. ಆದರೆ, ನಾವು ಇನ್ನೂ ಪರೀಕ್ಷೆಯನ್ನು ಮುಂದೂಡುತ್ತಿಲ್ಲ. ಕೆಲವೊಂದು ಪತ್ರಿಕೆ ಮಾತ್ರ ಮುಂದೂಡುತ್ತೇವೆ,” ಎಂದು ವಿವರಿಸಿದರು.
ರಾಜ್ಯಪಾಲರು ಮಸೂದೆಗಳನ್ನು ವಾಪಸ್ ಕಳುಹಿಸಿದ ವಿಚಾರವನ್ನೂ ಪ್ರಸ್ತಾಪಿಸಿದ ಸಿದ್ದರಾಮಯ್ಯ, “ಇದರ ಕುರಿತು ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡುತ್ತೇವೆ. ಇವು ಸದನದಲ್ಲಿ ಪಾಸ್ ಆದ ಮಸೂದೆಗಳಾಗಿವೆ. ರಾಜ್ಯಪಾಲರು ವಿವರಣೆ ಕೇಳಿದರೆ ನಾವು ನೀಡುತ್ತಿದ್ದೇವೆ. ಆದರೆ ಅವರು ಬಿಲ್‌ಗಳನ್ನು ವಾಪಸ್ ಕಳುಹಿಸಿರುವುದು ಬೇಸರದ ವಿಷಯವಾಗಿದೆ,” ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.