ಕೆನಡಾದಲ್ಲಿ ಕೊನೆಗೂ ನೇಪಥ್ಯಕ್ಕೆ ಸರಿದ ಭಾರತ ವಿರೊಧಿ ʼಟ್ರುಡೋ!!ʼ

ಕಡೆಗೂ ಕೆನಡಾ ಪ್ರಧಾನಿ, ಭಾರತ ವಿರೋಧಿ ಮನಸ್ಥಿತಿಯ ʼಜಸ್ಟಿನ್ ಟ್ರುಡೋʼ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಅಲ್ಲಿಗೆ ಕಳೆದ 9 ವರ್ಷಗಳ ಟ್ರುಡೋ ಆಡಳಿತ ಅಂತ್ಯಗೊಳ್ಳುವ ಸಮಯ ಹತ್ತಿರ ಬಂದಂತಾಗಿದೆ. ಕೆನಡಾದಲ್ಲಿ ಇದೇ ವರ್ಷಾಂತ್ಯಕ್ಕೆ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಈಗ ಪ್ರಮುಖ ವಿಪಕ್ಷವಾಗಿರುವ ʼಕನ್ಸರ್ವೇಟಿವ್ʼ ಪಕ್ಷವೇ ಅಧೀಕಾರಕ್ಕೇರಲಿದೆ ಎಂದು ಬಹುತೇಕ ಚುನಾವಣಾ ಪೂರ್ವ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಕೆನಡಾದ ಲಿಬರಲ್ ಪಕ್ಷದ ನೇತೃತ್ವ ವಹಿಸಿರುವ ಟ್ರುಡೋಗೆ, ರಾಜೀನಾಮೆ ನೀಡುವಂತೆ ಪಕ್ಷದೊಳಗೇ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಷ್ಟೇ ಅಲ್ಲ, ಕನಡಾದಲ್ಲಿ ಟ್ರುಡೋ ಜನಪ್ರಿಯತೆಯೂ ತೀವ್ರವಾಗಿ ಕುಸಿಯತೊಡಗಿತ್ತು. ಇವೆಲ್ಲವನ್ನೂ ಅರಿತೇ ಟ್ರುಡೋ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದು, ಯುದ್ಧ ಕಾಲಕ್ಕೆ ಮೊದಲೇ ರಣರಂಗದಲ್ಲಿ ಶಸ್ತ್ರತ್ಯಾಗ ಮಾಡಿದಂತಾಗಿದೆ!

2015ರಲ್ಲಿ ಕೆನಡಾದಲ್ಲಿ ಅಧಿಕಾರಕ್ಕೆ ಬಂದ ಕ್ಷಣದಿಂದಲೂ, ಟ್ರುಡೋ ಭಾರತ ವಿರೋಧಿ ನಿಲುವು ತಳೆಯಲು ಆರಂಭಿಸಿದ್ದರು. ಇದಕ್ಕೆ ಕಾರಣ ವೋಟ್ ಬ್ಯಾಂಕ್ ರಾಜಕಾರಣವೇ ಹೊರತು ಇನ್ನೇನಲ್ಲ. ಕೆನಡಾದಲ್ಲಿ ಸುಮಾರು 8 ಲಕ್ಷದಷ್ಟು(ಅಂದ್ರೆ ಒಟ್ಟೂ ಜನಸಂಖ್ಯೆಯ 2.1% ರಷ್ಟು) ಸಿಖ್ ಜನಸಂಖ್ಯೆಯಿದೆ. ಸಿಖ್ ಮತಗಳನ್ನು ಪಡೆದು ತಾನೊಬ್ಬನೇ ಸಾರ್ವಕಾಲಿಕ ನಾಯಕನಾಗಬೇಕು ಎಂದುಕೊಂಡಿದ್ದ ಜಸ್ಟಿನ್ ಟ್ರುಡೋ, ಭಾರತ ವಿರೋಧಿ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡಲು ಪ್ರಾಂರಂಭಿಸಿದ್ದರು. ಇದರ ಭಾಗವಾಗಿ, ಕೆನಡಾ ನೆಲದಲ್ಲಿ ಭಾರತ ವಿರೋಧಿ ʼಖಲಿಸ್ತಾನಿʼ ಭಯೋತ್ಪಾದಕ ಚಟಿವಟಿಕೆಗಳಿಗೂ ಈ ಟ್ರುಡೋನ ಪರೋಕ್ಷ ಬೆಂಬಲವಿತ್ತು. ಪರಿಣಾಮ ಟ್ರುಡೋನ ಆಳ್ವಿಕೆಯ ಆರಂಭದಿಂದಲೂ ಭಾರತ – ಕೆನಡಾ ರಾಜತಾಂತ್ರಿಕ ಸಂಬಂಧ ಹಳ್ಳ ಹಿಡಿಯಲು ಆರಂಭಿಸಿತ್ತು.
ʼಖಲಿಸ್ತಾನಿ ಚಟುವಟಿಕೆಗಳಿಗೆ ಕೆನಡಾದ ನೆಲ ಬಳಕೆಯಾಗಲು ಅವಕಾಶ ನೀಡಬೇಡಿ, ಭಾರತಕ್ಕೆ ಬೇಕಾಗಿರುವ ಖಲಿಸ್ತಾನಿ ಅಪರಾಧಿಗಳನ್ನು ಭಾರತಕ್ಕೆ ಹಸ್ತಾಂತರಿಸಿʼ ಎಂದು ಭಾರತ ಸರ್ಕಾರ ಲೆಕ್ಕವಿಲ್ಲದಷ್ಟು ಬಾರಿ ಕೆನಡಾಕ್ಕೆ ಮನವಿ ಮಾಡಿಕೊಂಡರೂ, ಈ ಟ್ರುಡೋ ಅದರ ಬಗ್ಗೆ ಕ್ಯಾರೆ ಎನ್ನುತ್ತಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಅಕ್ಷರಶಃ ಅಮೆರಿಕದ ಕೈಗೊಂಬೆಯೇ ಆಗಿದ್ದ ಟ್ರುಡೋ, ಪೂರ್ಣ ಪ್ರಮಾಣದ ಭಾರತ ವಿರೋಧಿಯಾಗಿ ಬದಲಾಗಿದ್ದ. ಟ್ರುಡೋನ ಅತಿರೇಕ ಯಾವ ಮಟ್ಟಿಗಿತ್ತು ಎಂದರೆ, ಕೆನಡಾದ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಕೊಲೆಯಲ್ಲಿ, ಭಾರತದ ಕೈವಾಡವಿದೆ, ಇದರಲ್ಲಿ ಭಾರತದ ರಾಜತಾಂತ್ರಿಕ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಕೆನಡಾದ ಸಂಸತ್ತಿನಲ್ಲೇ ಭಾರತದ ವಿರುದ್ಧ ಆರೋಪ ಮಾಡಿದ್ದ. ಅದೂ ಭಾರತದ ವಿರುದ್ಧ ಆರೋಪಕ್ಕೆ ಪೂರಕವಾದ ಯಾವುದೇ ದಾಖಲೆಗಳಿಲ್ಲದೇ!!
ಈ ಆರೋಪಕ್ಕೆ ತಕ್ಕ ಸಾಕ್ಷ್ಶ ಒದಗಿಸಿ ಎಂದು ಭಾರತ ಸರ್ಕಾರ ಹಲವು ಬಾರಿ ಕೆನಡಾ ಸರ್ಕಾರಕ್ಕೆ ಆಗ್ರಹಿಸಿದರೂ, ಭರತದ ವಿರುದ್ಧ ಯಾವುದೇ ದಾಖಲೆ ಒದಗಿಸಲು, ಟ್ರುಡೋಗಾಗಲಿ ಅಥವಾ ಕೆನಡಾ ಸರ್ಕಾರಕ್ಕಾಗಲಿ ಸಾಧ್ಯವಾಗಲಿಲ್ಲ. ಟ್ರುಡೋನ ಅತಿಯಾದ ಓಲೈಕೆಯ ಪರಿಣಾಮ, ಕೆನಡಾ ಖಲಿಸ್ತಾನಿಗಳ ಸ್ವರ್ಗವಾಗಿ ಬದಲಾಗುತ್ತಿದೆ. ಇದು ಕೆನಡಾದಲ್ಲಿನ ಭಾರತೀಯರ ಪಾಲಿಗೆ, ವಿಶೇಷವಾಗಿ ಹಿಂದೂಗಳಿಗೆ ಅಪಾಯಕಾರಿ ಬೆಳವಣಿಗೆ. ಈಗಾಗಲೇ ಕೆನಡಾದಲ್ಲಿ ಖಲಿಸ್ತಾನಿ ಉಗ್ರರಿಂದ, ಹಿಂದೂಗಳ ಮೇಲೆ, ಹಿಂದೂ ಮಂದಿರಗಳ ಮೇಲೆ ಲೆಕ್ಕವಿಲ್ಲದಷ್ಟು ದಾಳಿಗಳು ನಡೆದಿವೆ. ಕೆಲವು ನಿಗೂಢ ಹತ್ಯೆಗಳೂ ನಡೆದಿವೆ. ಟ್ರುಡೋನ ಬೆಂಬಲದಿಂದ ಈ ಖಲಿಸ್ತಾನಿ ಕ್ರಿಮಿಗಳು ಯಾವ ರೀತಿ ಚಿಗುರಿಕೊಂಡಿದ್ದಾರೆಂದರೆ, ʼಕೆನಡಾದಲ್ಲಿನ ಹಿಂದೂಗಳು ದೇಶ ತೊರೆಯದಿದ್ದರೆ, ಅವರನ್ನು ಕೊಲೆ ಮಾಡಬೇಕಾಗುತ್ತದೆʼ ಎಂದು ಬಹಿರಂಗವಾಗಿ ಬೆದರಿಕೆ ಹಾಕುವಷ್ಟು!!

ಇದೆಲ್ಲದರ ಪರಿಣಾಮ ಭಾರತ – ಕೆನಡಾ ರಾಜತಾಂತ್ರಕ ಸಂಬಂಧಗಳು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿವೆ. ಇದಕ್ಕೆಲ್ಲ ಏಕಮಾತ್ರ ಕಾರಣ ಈ ಜಸ್ಟಿನ್ ಟ್ರುಡೋ. ತನ್ನ 9 ವರ್ಷಗಳ ಆಡಳಿತಾವಧಿಯಲ್ಲಿ, ಕೇವಲ ಭಾರತ ವಿರೋಧಿ ಖಲಿಸ್ತಾನಿ ಭಯೋತ್ಪಾದಕರನ್ನು ಬೆಳೆಸಿದ್ದು & ಕೆನಡಾದ ಘನತೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗುವಂತೆ ಮಾಡಿದ್ದೇ ಈ ಟ್ರುಡೋನ ಸಾಧನೆ. ಕೊನೆಗೂ ಈ ಭಾರತ ವಿರೋಧಿಯ ಆಡಳಿತ ಅಂತ್ಯವಾಗುವ ದಿನಗಳು ಸನ್ನಿಹಿತವಾಗಿದ್ದು, ಆದಷ್ಟು ಬೇಗ ಈ ಟ್ರುಡೋ ತನ್ನ ಮನೆಯಲ್ಲಿ ವಿಶ್ರಾಂತಿ ಪಡೆಯಲಿ ಎಂದು ಆಶಿಸೋಣ!!
ಗಜಾನನ ಭಟ್
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿ