ಚಂದ್ರಬಾಬು ನಾಯ್ಡು ಗಂಭೀರ ಆರೋಪ: ತಿರುಪತಿ ಲಡ್ಡುವಿನಲ್ಲಿ ಬಳಸುತ್ತಿದ್ದರೇ ಪ್ರಾಣಿಗಳ ಕೊಬ್ಬು..?!
ಅಮರಾವತಿ: ತಿರುಪತಿಯಲ್ಲಿ ಪ್ರಸಾದವಾಗಿ ನೀಡಲಾಗುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದ ಪ್ರಸಿದ್ಧ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್ದಾರೆ.
ಅಮರಾವತಿಯಲ್ಲಿ ನಡೆದ ಎನ್‌ಡಿಎ ಸಭೆಯಲ್ಲಿ ಮಾತನಾಡಿದ ಅವರು, “ತಿರುಪತಿಯಲ್ಲಿ ನೀಡುವ ಲಡ್ಡು ಕಳಪೆ ಗುಣಮಟ್ಟದ ಪದಾರ್ಥಗಳಿಂದ ತಯಾರಿಸಲಾಯಿತು. ಅವರು(ವೈಎಸ್‌ಆರ್‌ಸಿಪಿ) ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಿದ್ದಾರೆ,” ಎಂದು ಆರೋಪಿಸಿದರು.
ಇದರ ಬೆನ್ನಿಗೆ, ಆಂಧ್ರಪ್ರದೇಶ ಐಟಿ ಸಚಿವ ನಾರಾ ಲೋಕೇಶ್ ಕೂಡ ವೈಎಸ್‌ಆರ್‌ಸಿಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
“ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯವು ನಮ್ಮ ಅತಿ ಪವಿತ್ರ ದೇವಾಲಯ. ಈ ಪ್ರಸಾದ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬುದು ಅಸಹ್ಯಕರ ವಿಷಯ,” ಎಂದು ಅವರು ‘ಎಕ್ಸ್’ ಖಾತೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಇದಕ್ಕೆ ಪ್ರತಿಯಾಗಿ, ವೈಎಸ್‌ಆರ್‌ಸಿಪಿ ನಾಯಕರಾದ ಸುಬ್ಬ ರೆಡ್ಡಿ, ಚಂದ್ರಬಾಬು ನಾಯ್ಡು ಅವರ ಆರೋಪವನ್ನು “ದುರುದ್ದೇಶ ಪೂರಿತ” ಎಂದು ತಿರಸ್ಕರಿಸಿದರು.
“ತಿರುಮಲ ಪ್ರಸಾದದ ಬಗ್ಗೆ ನಾಯ್ಡು ಮಾಡಿರುವ ಮಾತುಗಳು ಅದರ ಪವಿತ್ರತೆಯನ್ನು ಹಾಳು ಮಾಡುತ್ತವೆ ಮತ್ತು ಲಕ್ಷಾಂತರ ಹಿಂದೂಗಳ ನಂಬಿಕೆಗೆ ಧಕ್ಕೆ ತರುತ್ತವೆ. ನಾಯ್ಡು ಈ ಬಗ್ಗೆ ದೇವರ ಮುಂದೆ ಪ್ರಮಾಣ ಮಾಡುವ ಸವಾಲನ್ನು ಸ್ವೀಕರಿಸಬಹುದೇ?” ಎಂದು ರೆಡ್ಡಿ ಪ್ರಶ್ನಿಸಿದರು.
ಈ ವಿವಾದವು ರಾಜ್ಯ ರಾಜಕೀಯದಲ್ಲಿ ಪ್ರಚೋದನಕಾರಿ ವಿಷಯವಾಗಿ ರೂಪ ಪಡೆಯುತ್ತಿದೆ.