Politics

ಚನ್ನಪಟ್ಟಣ ಉಪಚುನಾವಣೆ: ಸಿ.ಪಿ. ಯೋಗೀಶ್ವರ್ ಅಧಿಕೃತ ‘ಕಾಂಗ್ರೆಸ್’ ಅಭ್ಯರ್ಥಿ, ಜೆಡಿಎಸ್‌ನಿಂದ ಯಾರು..?!

ಚನ್ನಪಟ್ಟಣ: ಕರ್ನಾಟಕದ ರಾಜ್ಯ ರಾಜಕೀಯದಲ್ಲಿ ತೀವ್ರವಾಗಿ ಕುತೂಹಲ ಕೆರಳಿಸಿದ ಸಿ.ಪಿ. ಯೋಗೀಶ್ವರ್ ಅವರ ರಾಜೀನಾಮೆ ಈಗ ಮತ್ತೊಂದು ತಿರುವನ್ನು ತಂದುಕೊಟ್ಟಿದೆ. ಚೆನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಸಿ.ಪಿ. ಯೋಗೀಶ್ವರ್ ಅವರು ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ. ಇವರ ಈ ನಡೆ ರಾಜ್ಯದ ಜನರ ಗಮನವನ್ನು ಚನ್ನಪಟ್ಟಣದತ್ತ ಹರಿಸುವಂತೆ ಮಾಡಿದೆ.

ಬಿಜೆಪಿ ಬೆನ್ನಿಗೆ ಚೂರಿ..?

ಕೇಂದ್ರ ಮಂತ್ರಿಗಳಾದಂತ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಎಚ್. ಡಿ. ಕುಮಾರಸ್ವಾಮಿ ಅವರು ಲೋಕಸಭೆಯ ಸದನದ ಸದಸ್ಯರಾದ ನಂತರ ಖಾಲಿಯಾಗಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಿಗದಿಯಾಗಿತ್ತು. ಈ ಕ್ಷೇತ್ರಕ್ಕೆ ಮಾಜಿ ಶಾಸಕರಾದ ಸಿ.ಪಿ. ಯೋಗೀಶ್ವರವರು ಬಿಜೆಪಿ ವತಿಯಿಂದ ಟಿಕೇಟನ್ನು ಆಕಾಂಕ್ಷಿಸಿದ್ದರು. ಆದರೆ ಈ ಕ್ಷೇತ್ರದಲ್ಲಿ ಜೆಡಿಎಸ್ ಪ್ರಭಾವ ಅಧಿಕವಾಗಿರುವ ಕಾರಣದಿಂದ ಬಿಜೆಪಿ ಯೋಗೀಶ್ವರ್ ಅವರಿಗೆ ಟಿಕೆಟ್ ನೀಡಲು ಹಿಂದೇಟು ಹಾಕಿತ್ತು. ಅದೇ ರೀತಿ ಚನ್ನಪಟ್ಟಣ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಜೆಡಿಎಸ್ ಕಣಕ್ಕೆ ಇಳಿಸಲಿದೆ ಎಂಬ ವದಂತಿ ಕೂಡ ಹರಿದಾಡುತ್ತಿತ್ತು. ಹೀಗಾಗಿ ಸಿ.ಪಿ. ಯೋಗೀಶ್ವರ್ ಅವರು ಅಕ್ಟೋಬರ್ 21ಕ್ಕೆ ರಾಜೀನಾಮೆ ನೀಡಿದ್ದರು.

ಓಪನ್ ಆಯ್ತು ಕಾಂಗ್ರೆಸ್ ಪಕ್ಷದ ಬಾಗಿಲು:

ರಾಜೀನಾಮೆ ನೀಡುವ ಸಂದರ್ಭದಲ್ಲಿ ಯೋಗೀಶ್ವರ್ ಅವರು ನಾನು ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದರು. ನಾನು ಕಾಂಗ್ರೆಸ್ ಪಕ್ಷವನ್ನು ಪ್ರವೇಶಿಸುವುದಿಲ್ಲ ಎಂದು ಕೂಡ ಮಾಧ್ಯಮಗಳೊಂದಿಗೆ ಹೇಳಿಕೊಂಡಿದ್ದರು. ಆದರೆ ಬದಲಾವಣೆ ಜಗದ ನಿಯಮ ಎಂಬಂತೆ, ಯೋಗೀಶ್ವರವರು ಕಾಂಗ್ರೆಸ್‌ನ ತೆರೆದ ಬಾಗಿಲೊಳಗೆ ಕಾಲಿಟ್ಟಿದ್ದಾರೆ.

ಡಿಕೆಶಿ ಭೇಟಿಯಾದ ಸೈನಿಕ:

ಕಾಂಗ್ರೆಸ್ ಪಕ್ಷವನ್ನು ಸೇರುವುದಕ್ಕಿಂತ ಮುಂಚೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾದ ಯೋಗೀಶ್ವರ್ ಅವರು ಹಲವು ಚರ್ಚೆಗಳನ್ನು ನಡೆಸಿದ್ದಾರೆ ಎನ್ನಲಾಗಿದೆ. ಅದರಂತೆ ಮುಂಬರುವ ಉಪಚುನಾವಣೆಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ನ್ನು ಸಿ.ಪಿ. ಯೋಗೀಶ್ವರ್ ಅವರಿಗೆ ನೀಡಲಿದ್ದಾರೆ ಎಂಬ ಮಾಹಿತಿ ಕೂಡ ಈಗ ಲಭ್ಯವಾಗಿದೆ. ಅಂತೂ ಕಾಂಗ್ರೆಸ್ ಈ ಉಪಚುನಾವಣೆಯಲ್ಲಿ ಬುದ್ಧಿವಂತಿಕೆಯ ಹೆಜ್ಜೆಯನ್ನು ಚನ್ನಪಟ್ಟಣದಲ್ಲಿ ಇಟ್ಟಿದೆ.

ಜೆಡಿಎಸ್ ಅಭ್ಯರ್ಥಿ ಯಾರು?

ಕರ್ನಾಟಕದ ಈ ಉಪಚುನಾವಣೆಯಲ್ಲಿ ಬಾರಿ ಕುತೂಹಲ ಮೂಡಿಸಿರುವ ಪ್ರಶ್ನೆ ಎಂದರೆ, ಚನ್ನಪಟ್ಟಣ ಕ್ಷೇತ್ರದಲ್ಲಿ ಯಾರನ್ನು ಜೆಡಿಎಸ್ ಚುನಾವಣಾ ರಣಕಣಕ್ಕೆ ಇಳಿಸಲಿದೆ ಎಂಬುದು. ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿಯ ಹೆಸರು ಈ ಹಿಂದೆ ಕೇಳಿ ಬಂದಿದ್ದರು ಕೂಡ, ಈಗ ಸುದ್ದಿಯಲ್ಲಿರುವ ಜೆಡಿಎಸ್ ಅಭ್ಯರ್ಥಿಯ ಹೆಸರು ಎಂದರೆ ಅದು ಅನಿತಾ ಕುಮಾರಸ್ವಾಮಿ ಅವರದ್ದು. ರೋಚಕ ತಿರುವುಗಳನ್ನು ಕಾಣುತ್ತಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಯಾರ ಪಾಲಾಗಲಿದೆ ಎಂಬ ಪ್ರಶ್ನೆಗೆ ಸದ್ಯದಲ್ಲೇ ಉತ್ತರ ಸಿಗಲಿದೆ.

Show More

Related Articles

Leave a Reply

Your email address will not be published. Required fields are marked *

Back to top button