Alma Corner

ಪತ್ರಿಕೋದ್ಯಮದ ಹೃದಯವನ್ನು ಅನ್ವೇಷಿಸಿದ ಅಪರೂಪದ ಅನುಭವ…!

ನನ್ನ ಪತ್ರಿಕೋದ್ಯಮ ಜೀವನದಲ್ಲಿ ಮೊದಲ ಬಾರಿಗೆ ಕನ್ನಡದ ಪ್ರಮುಖ ಸುದ್ದಿ ವಾಹಿನಿಯಾದ ಎಷ್ಯಾನೆಟ್ ಸುವರ್ಣ ಮಾಧ್ಯಮಕ್ಕೆ ಭೇಟಿ ನೀಡುವ ಅವಕಾಶವನ್ನು ಆಲ್ಮಾ ಮೀಡಿಯಾ ಸ್ಕೂಲ್ ಕಲ್ಪಿಸಿ ಕೊಟ್ಟಿತು. ಮನೆಯಲ್ಲಿ ತೆರೆಯ ಮೇಲೆ ಬರುವ ಸುದ್ದಿ ವಾಹಿನಿ ಮತ್ತು ಸುದ್ದಿ ವಾಹಿನಿಯ ಒಳಗೆ ನಡೆಯುವ ಕೆಲಸ ವಿಭಿನ್ನವಾಗಿರುತ್ತದೆ. ಮಾಧ್ಯಮ ಲೋಕದಲ್ಲಿ ಕೆಲಸ ಮಾಡುವವರು ಬಿಡುವೇ ಇಲ್ಲದಂತೆ ಕೆಲಸದಲ್ಲಿ ಮುಳುಗಿರುತ್ತಾರೆ. ಪ್ರತಿಯೊಬ್ಬರೂ ಅವರವರ ಕಾರ್ಯದಲ್ಲಿ ನಿರತರಾಗಿರುತ್ತಾರೆ. ಪತ್ರಿಕೋದ್ಯಮದಲ್ಲಿ ಸಾಕಷ್ಟು ಸವಾಲುಗಳಿರುತ್ತವೆ. ಒಂದು ಸುದ್ದಿಯು ಮಾಧ್ಯಮದೊಳಗೆ ಬಂದು ಜನರನ್ನು ತಲುಪುವವರೆಗೂ ಅದೆಷ್ಟೋ ಹಂತಗಳನ್ನು ಕಂಡಿರುತ್ತದೆ. ಸುವರ್ಣ ನ್ಯೂಸ್ ನಲ್ಲಿ ಪತ್ರಕರ್ತರ ಅವಸರ ಮತ್ತು ಅವರಿಗಿರುವ ಉತ್ಸಾಹವು ಬೆರಗಾಗುವ ರೀತಿ ಇದ್ದದ್ದು ಸ್ಪಷ್ಟವಾಗಿ ಕಾಣುತ್ತಿತ್ತು.


ನಮ್ಮ ದೇಶದಲ್ಲಿ ಸುದ್ದಿ ಮಾಧ್ಯಮವು ಅತ್ಯಂತ ಶಕ್ತಿಶಾಲಿ ಸಾಧಾನವಾಗಿದ್ದು, ಕನ್ನಡದಲ್ಲಿ ಉನ್ನತ ಮಟ್ಟದ ಸುದ್ದಿಗಳನ್ನು ನೀಡುವ ಸುವರ್ಣ ನ್ಯೂಸ್ ವೀಕ್ಷಕರ ಮೇಲೆ ವಿಶೇಷ ಪ್ರಭಾವವನ್ನು ಬೀರುತ್ತಿದೆ. ಪ್ರತಿದಿನ ಈ ಮಾಧ್ಯಮ ಮುಕ್ತ ಮತ್ತು ನಿಖರವಾದ ಸುದ್ದಿಗಳನ್ನು ಪ್ರಸ್ತುತಪಡಿಸುತ್ತಿದೆ, ಸಮಾಜದ ವಿವಿಧ ಆಯಾಮಗಳನ್ನು ಸ್ಪರ್ಶಿಸುತ್ತದೆ. ಈ ವಾಹಿನಿಯ ವಿಶೇಷತೆ ಎಂದರೆ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು ಸಮತೋಲನದಿಂದ ನೀಡುತ್ತಿದೆ. ಕರ್ನಾಟಕದ ಸ್ಥಳೀಯ ಸಮಸ್ಯೆಗಳನ್ನು, ರೈತರ ಕಷ್ಟಗಳನ್ನು ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಅತ್ಯಂತ ಹೊಳಪು ಕೊಟ್ಟು ವೀಕ್ಷಕರಿಗೆ ತಲುಪಿಸುತ್ತಿದೆ.


ಮಾಧ್ಯಮದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಸಿಬ್ಬಂದಿಗೂ ಎಲ್ಲಾ ವಿಭಾಗದ ಬಗ್ಗೆ ಸಂಪೂರ್ಣ ಜ್ಞಾನವನ್ನು ಹೊಂದಿರರುತ್ತಾರೆ. ಗ್ರಾಫಿಕ್ ವಿಭಾಗವು ಹಲವಾರು ರೀತಿಯ ಸಾಫ್ಟ್‌ವೇರ್‌ಗಳನ್ನು ಉಪಯೋಗಿಸಿ ಒಂದು ಸುದ್ದಿಯನ್ನು ಆಕರ್ಷಿತವಾಗಿ ರಚನೆ ಮಾಡಿ ಸುದ್ದಿಯನ್ನು ಜನರಿಗೆ ತಲುಪಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ವಾಹಿನಿಯ ಸುದ್ದಿ ನಿರೂಪಕರ ಸ್ಪಷ್ಟ ಕನ್ನಡ ಉಚ್ಚಾರಣೆ, ಅವರ ಆತ್ಮವಿಶ್ವಾಸ ಹಾಗೂ ಕ್ಯಾಮೆರಾ ಫೇಸ್‌ ಮಾಡುವ ರೀತಿಯು ನಿರೂಪಕರಿಗಿರುವ ಜ್ಞಾನವನ್ನು ತಿಳಿಸಿಕೊಡುತ್ತದೆ. ಕೆಲವು ನಿರೂಪಕರಂತೂ ಸುದ್ದಿಯ ಬಗ್ಗೆ ಆಳವಾಗಿ ತಿಳಿದುಕೊಂಡು ಸಂಕ್ಷಿಪ್ತವಾಗಿ ವಿವರಿಸುವಲ್ಲಿ ಚತುರರಾಗಿರುತ್ತಾರೆ. ನಿರೂಪಕರ ಸಹಾಯಕ್ಕಾಗಿ ತೆರೆಮರೆಯಲ್ಲಿ ಒಂದು ಟೆಕ್ನಿಕಲ್ ತಂಡವಿರುತ್ತದೆ, ಈ ತಂಡವು ನಿರೂಪಕರನ್ನು ಸಂಪರ್ಕ ಮಾಡುತ್ತಲೇ ಇರುತ್ತಾರೆ, ಯಾವ ಸುದ್ದಿಯಾದ ನಂತರ ಯಾವ ಸುದ್ದಿಯನ್ನು ಓದಬೇಕು, ಯಾವಾಗ ಬ್ರೇಕ್‌ ತಗೆದುಕೊಳ್ಳಬೇಕು ಎಂಬುದರ ಮಾಹಿತಿಯನ್ನು ನೀಡುತ್ತಿರುತ್ತಾರೆ. ಪಿಸಿಆರ್‌ ಮತ್ತು ಎಮ್‌ಸಿಆರ್‌ ವಿಭಾಗವು ಆಡಿಯೋ ಮತ್ತು ವಿಡಿಯೋದ ಕಾರ್ಯವನ್ನು ನೋಡಿಕೊಳ್ಳುತ್ತದೆ, ಈ ವಿಭಾಗದ ಉಸ್ತುವಾರಿಯನ್ನು ಪ್ಯಾನಲ್ ನಿರ್ಮಾಪಕರು ನಿಭಾಯಿಸುತ್ತಾರೆ. ಸ್ಟುಡಿಯೋ ಸೆಟ್‌ನಲ್ಲಿ ಲೈಟಿಂಗ್ ಹಾಗೂ ಕ್ಯಾಮೆರಾಗಳ ಫೇಸಿಂಗ್‌ ತುಂಬಾ ಮುಖ್ಯವಾಗಿರುತ್ತದೆ, ಹಲವಾರು ಕ್ಯಾಮೆರಾಗಳನ್ನು ಬಳಸಿಕೊಂಡು ಒಂದು ಕಾರ್ಯಕ್ರಮದ ಛಾಯಾಗ್ರಹಣ ಮತ್ತು ಚಿತ್ರೀಕರಣವನ್ನು ಮಾಡುತ್ತಾರೆ.

ಸುದ್ದಿ ವಾಹಿನಿಯಲ್ಲಿ ನಿರೂಪಕರಿಗೆ ಸೌಂದರ್ಯಕ್ಕಿಂತ ಹೆಚ್ಚಾಗಿ ಜ್ಞಾನವು ಮುಖ್ಯ, ನೋಡಲು ಚೆನ್ನಾಗಿರುವ ಮಾತ್ರಕ್ಕೆ ಸುದ್ದಿವಾಹಿನಿಯಲ್ಲಿ ನಿರೂಪಕರಾಗಲು ಸಾಧ್ಯವಿಲ್ಲ, ಎಲ್ಲಾ ವಿಷಯಗಳ ಬಗ್ಗೆ ಆಳವಾದ ಜ್ಞಾನವನ್ನು ಅರಿಯುವುದರಿಂದ ಮಾತ್ರ ಒಳ್ಳೆಯ ಪತ್ರಕರ್ತರಾಗಲು ಸಾಧ್ಯ, ಎಂಬುದು ಸುವರ್ಣ ಸುದ್ದಿ ವಾಹಿನಿಯ ಮುಖ್ಯ ಸಂಪಾದಕ ಅಜಿತ್‌ ಹನಮಕ್ಕನವರ್‌ ಅವರ ಸ್ವಂತ ಅನುಭವದ ಮಾತಾಗಿದೆ.


ʼಸುದ್ದಿ ವಾಹಿನಿಯಲ್ಲಿ ಕೆಲಸ ಮಾಡಲು, ಜ್ಞಾನ ಸಂಗ್ರಹಣೆ ಬೇಕು. ಹೆಚ್ಚು ಹೆಚ್ಚಾಗಿ ಓದುವುದು, ಬರೆಯುವುದು ಮತ್ತು ಕಲಿಯುವುದು ಮಾಡುವುದರಿಂದ ಮಾತ್ರ ಪತ್ರಿಕೋದ್ಯಮದಲ್ಲಿ ಕೆಲಸ ನಿರ್ವಹಿಸಬಹುದುʼ ಎಂಬುದು ಶೋಭಾ ಮಳವಳ್ಳಿ ಅವರ ಸ್ವಂತ ಅನುಭವದ ಮಾತಾಗಿತ್ತು.


ಸುದ್ದಿ ಮಾಧ್ಯಮವು ಜನತೆಯ ಕಣ್ಣು ಮತ್ತು ಕಿವಿ. ಸುವರ್ಣ ಮಾಧ್ಯಮವು ಒಳ್ಳೆಯ ಚಿಂತನೆಗೆ ಪ್ರೆರಣೆ ನೀಡುತ್ತದೆ, ಮತ್ತು ಅನುಭವವನ್ನು ಸುಧಾರಿಸುತ್ತದೆ. ಸುವರ್ಣ ಸುದ್ದಿ ವಾಹಿನಿಯು ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಮತ್ತು ಜನರ ನಂಬಿಕೆಯನ್ನು ಗಳಿಸುತ್ತಿರುವ ವಾಹಿನಿ ಎಂಬುದು ಸ್ಪಷ್ಟ. ಈ ವಾಹಿನಿಯು ಕನ್ನಡಿಗರ ನಿಜವಾದ ಧ್ವನಿ ಎಂದರೆ ತಪ್ಪಾಗಲಾರದು.

ಹೇಮ ಎನ್‌.ಜೆ
ಆಲ್ಮಾ ಮೀಡಿಯಾ ಸ್ಕೂಲ್‌ ವಿದ್ಯಾರ್ಥಿನಿ

Show More

Leave a Reply

Your email address will not be published. Required fields are marked *

Related Articles

Back to top button