ನ್ಯೂಸ್ ಚಾನಲ್: ಒಂದು ವಿನೂತನ ಜಗತ್ತು, ಹೊಸ ಅನುಭವ..!
ನನ್ನ ಪತ್ರಿಕೋದ್ಯಮ ಪಯಣದಲ್ಲಿ ಇಂದು ಮರೆಯಲಾಗದ ದಿನ. ಮಾಧ್ಯಮ ತರಬೇತಿ ಕಾರ್ಯಕ್ರಮದ ಭಾಗವಾಗಿ, ಕನ್ನಡ ಮಾಧ್ಯಮ ಜಗತ್ತಿನ ಪ್ರಮುಖ ಸುದ್ದಿ ವಾಹಿನಿಯಾದ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಭೇಟಿ ನೀಡುವ ಸದಾವಕಾಶವನ್ನು ಆಲ್ಮಾ ಮೀಡಿಯಾ ಸ್ಕೂಲ್ ನೀಡಿತು. ಈ ಭೇಟಿ ಮಾಧ್ಯಮ ವಾಹಿನಿಯ ಕಾರ್ಯವೈಖರಿ ಮತ್ತು ಅಲ್ಲಿರುವ ಸವಾಲಿನ ವಾತಾವರಣದ ಬಗ್ಗೆ ಕಣ್ಣಾರೆ ನೋಡಿ ತಿಳಿಯುವ ಅವಕಾಶ ದೊರೆಯಿತು. ಸಹಜವಾಗಿಯೇ ಇದು ಪುಸ್ತಕಗಳಿಂದ ಕಲಿತ ಜ್ಞಾನಕ್ಕೆ ಜೀವಂತಿಕೆ ತುಂಬಿದ ಅನುಭವ ತಂದತ್ತಿತ್ತು. ಒಂದು ಸುದ್ದಿಯನ್ನು ಗುರುತಿಸಿ ಬರೆಯುವದರಿಂದ ಅದು ಪ್ರೇಕ್ಷಕರನ್ನ ತಲುಪುವವರೆಗಿನ ಪ್ರಕ್ರಿಯೆಯಲ್ಲಿನ ವಿವಿಧ ಆಯಾಮಗಳ ಪ್ರಾಮುಖ್ಯತೆಯ ಬಗ್ಗೆ ತಿಳಿದಿದ್ದು ಕಲಿಕೆಯ ಇನ್ನೊಂದು ಹಂತ ತಲುಪಿದ ಹಾಗಿತ್ತು.
ಸುದ್ದಿಮನೆಯಲ್ಲಿ, ಪತ್ರಕರ್ತರ ಉತ್ಸಾಹ, ಅವಸರವಿದ್ದರೂ ತುಂಬಾ ಎಚ್ಚರಿಕೆಯಿಂದ ಬಿಡುವಿರದೇ ಕೆಲಸವನ್ನು ನಿರ್ವಹಿಸುವುದು, ಗಮನ ಸೆಳೆಯಿತು. ಸುದ್ದಿಗಳನ್ನು ಪ್ರದರ್ಶಿಸುತ್ತಿರುವ ದೊಡ್ಡ-ದೊಡ್ಡ ಮಾನಿಟರ್‌ಗಳು, ಮುಖ್ಯಾಂಶಗಳನ್ನು ಬಿತ್ತರಿಸುತ್ತಿರುವ ಟಿವಿಗಳು, ಸುದ್ದಿಯನ್ನು ಕುರಿತ ಚರ್ಚೆಗಳು ಹಾಗೂ ಕೊಟ್ಟ ಗಡುವುನೊಳಗೆ ಕೆಲಸ ಪೂರೈಸುವ ಪ್ರಯತ್ನದಲ್ಲಿರುವ ಪತ್ರಕರ್ತರ ನಿರಂತರ ಓಡಾಟ, ಅಲ್ಲಿನ ಒತ್ತಡವನ್ನ ಎತ್ತಿ ತೋರುತ್ತಿತ್ತು. ರೀರ್ಪೊಟಿಂಗ್, ಎಡಿಟಿಂಗ್, ಗ್ರಾಫಿಕ್ಸ್, ಡೆಸ್ಕ್, ಸುದ್ದಿ ನಿರೂಪಣೆ, PCR ಹಾಗೂ ಟೆಕ್‌ನಿಕಲ್ ತಂಡ ಇವೆಲ್ಲಾ ವಿಭಾಗಗಳು ಒಂದು ಸುದ್ದಿಯನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಪ್ರೇಕ್ಷಕರಿಗೆ ಒಂದು ಉತ್ತಮ ಅನುಭವ ನೀಡಲು, ಈ ಎಲ್ಲ ವಿಭಾಗಗಳು ಪರಿಪೂರ್ಣವಾಗಿ ಹೊಂದಾಣಿಕೆಯಲ್ಲಿ ಕೆಲಸ ಮಾಡುವುದು ಅತ್ಯಗತ್ಯ. ಹೀಗಾಗಿ ಈ ಎಲ್ಲ ವಿಭಾಗಗಳ ಕಾರ್ಯವನ್ನ ಗಮನಿಸುವುದು ಪತ್ರಕರ್ತ ಆಗಬೇಕೆನ್ನುವವರಿಗೆ ಅವಶ್ಯಕ.
ಮೊದಲನೆಯದಾಗಿ, ಗ್ರಾಫಿಕ್ಸ್ ವಿಭಾಗ ಹಲವಾರು ಸಾಫ್ಟ್ವೇರ್ ಬಳಸಿ ಸುದ್ದಿಯನ್ನು ಮತ್ತಷ್ಟು ಆಕರ್ಷಿಕವಾಗಿ ಮಾಡಲು ಗ್ರಾಫಿಕ್ಸ್ ಎಷ್ಟು ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿದುಕಂಡೆವು. ಮಾಧ್ಯಮ ಜಗತ್ತಿನಲ್ಲಿ ಡಿಜಿಟಲ್ ವಿಂಗ್ ಸಹ ಪ್ರಮುಖ ಘಟಕ ಎನ್ನುವದರಲ್ಲಿ ಎರಡು ಮಾತಿಲ್ಲ. ಮಧ್ಯಾಹ್ನ 1 ಗಂಟೆಯ ಸುದ್ದಿ ಬುಲೆಟಿನ್‌ನ ನೇರಪ್ರಸಾರದಲ್ಲಿ ನಿರೂಪಕಿ ಶ್ವೇತಾ ಆಚಾರ್ಯ ಅವರ ನಿಖರವಾದ, ಆತ್ಮವಿಶ್ವಾಸ ತುಂಬಿದ ಮಾತುಗಳು ಹಾಗೂ ಸುದ್ದಿಯನ್ನು ಪ್ರಸ್ತುತಪಡಿಸುವ ರೀತಿ ಸ್ಫೂರ್ತಿದಾಯಕವಾತ್ತು. ಅವರನ್ನು ಸುದ್ದಿ ನಿರೂಪಣೆಯನ್ನ ಪರಿಪೂರ್ಣವಾಗಿಸಲು, ತೆರೆಮರೆಯಲ್ಲಿ ಟೆಕ್‌ನಿಕಲ್ ತಂಡವೂ ಅಷ್ಟೇ ತ್ವರಿತವಾಗಿ ಕೆಲಸ ಮಾಡುತ್ತಿದ್ದರು. ಪಿಸಿಆರ್, ಎಂಸಿಅರ್ ಅಲ್ಲಿ ಆಡಿಯೋ, ವೀಡಿಯೋ ಹಾಗೂ ಪ್ಯಾನೆಲ್ ನಿರ್ಮಾಪಕರ ಆ ವೇಗ ಅಚ್ಚರಿಯೊಂಟು ಮಾಡದೇ ಇರವುದಿಲ್ಲ. ನಂತರ ಸುದ್ದಿ ಮತ್ತು ಕಾರ್ಯಕ್ರಮ ಚಿತ್ರೀಕರಣದಲ್ಲಿ, ಸ್ಟೂಡಿಯೋ ಸೆಟ್, ಛಾಯಗ್ರಹಣ, ಲೈಟಿಂಗ್‌ಗಳು ವಹಿಸುವ ಪ್ರಮುಖ ಪಾತ್ರವನ್ನು ಆಯಾ ವಿಭಾಗಗದ ತಜ್ಞರಿಂದ ಮಾಹಿತಿ ಪಡೆದದ್ದು ವಿಶೇಷವಾಗಿತ್ತು.
ಸುದ್ದಿ ನಿರೂಪಣೆಯಲ್ಲಿ ಎಲ್ಲಾ ಕ್ಷೇತ್ರಗಳ ಬಗೆಗಿನ ಜ್ಞಾನವು ಮುಖ್ಯವಾಗಿರುತ್ತದೆ, ನಿರೂಪಣೆಯಲ್ಲಿ ಸೌಂದರ್ಯಕ್ಕಿಂತ ನಮ್ಮಲ್ಲಿರುವ ಜ್ಞಾನವು ಮುಖ್ಯವೆಂದು ಹೇಳುವ ಮೂಲಕ ವಾಹಿನಿಯ ಮುಖ್ಯ ಸಂಪಾದಕರಾದ ಅಜಿತ್ ಹನಮಕ್ಕನವರ್ ಅವರ ಪತ್ರಿಕೋದ್ಯಮದ ಸುದೀರ್ಘ ಅನುಭವವನ್ನ ಹಂಚಿಕೊಂಡರು. ಪತ್ರಿಕೋದ್ಯಮದಲ್ಲಿ ಓದುವುದು, ಜ್ಞಾನ ಸಂಗ್ರಹಣೆ ಮತ್ತು ಬರವಣಿಗೆಯ ಬಗ್ಗೆ ಅಮೂಲ್ಯವಾದ ಮಾಹಿತಿಯನ್ನು ವಾಹಿನಿಯ ಔಟ್‌ಪುಟ್ ಹೆಡ್ ಶೋಭಾ ಮಳವಳ್ಳಿ ಅವರು ತಿಳಿಸಿಕೊಟ್ಟರು. ಈ ನಿರಂತರವಾಗಿ ವಿಕಸನ ಹೊಂದುತ್ತಿರುವ ಮಾಧ್ಯಮ ಉದ್ಯಮದಲ್ಲಿ ಟೀಮ್‌ವರ್ಕ್ ಮತ್ತು ಹೊಂದಾಣಿಕೆ ತುಂಬಾ ಮಹತ್ವ ಅನ್ನುವುದನ್ನು ತಿಳಿದುಕೊಂಡೆವು.
ಈ ವೃತ್ತಿ ಸಮರ್ಪಣೆ, ಕುತೂಹಲ, ಗ್ರಹಿಕೆ ಮತ್ತು ಸಮಗ್ರತೆಯನ್ನು ಬಯಸುತ್ತದೆ. ಸುದ್ದಿವಾಹಿನಿಗೆ ಭೇಟಿ ನೀಡಿದ್ದು, ಪತ್ರಿಕೋದ್ಯಮದಲ್ಲಿ ವೃತ್ತಿಜೀವನವನ್ನು ಮುಂದುವರಿಸುವ ನನ್ನ ಸಂಕಲ್ಪವನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಸುದ್ದಿಮನೆಯಿಂದ ಹೊರಬಂದಾಗ, ನಾನು ಪತ್ರಕರ್ತೆಯಾಗುವ ಗುರಿಯತ್ತ ನಡೆಯಲು ಇನ್ನೂ ಪ್ರೇರಿತವಾಗಿ, ಮುಂಬರುವ ನಾನಾರೀತಿಯ ಸವಾಲುಗಳು ಮತ್ತು ಅವಕಾಶಗಳನ್ನು ಎದುರಿಸುವ ಆತ್ಮಾವಿಶ್ವಾಸ ನನ್ನಲ್ಲಿ ತುಂಬಿಕೊಂಡಿದೆ.
ಧನ್ಯಾ ರೆಡ್ಡಿ
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ