ಮನವಿ ಪತ್ರಗಳಿಗೆ ಮನ್ನಣೆ ನೀಡದ ಸಿಎಂ ಸಿದ್ದರಾಮಯ್ಯ; ಕಸದ ಬುಟ್ಟಿ ಸೇರಿದ ರೈತರ ಮನವಿ ಪತ್ರಗಳು.
ಬೆಂಗಳೂರು: ಚಾಮರಾಜನಗರದಲ್ಲಿ ಜುಲೈ 10ರಂದು ನಡೆದಿದ್ದ ಕಾಂಗ್ರೆಸ್ ಪಕ್ಷದ ಕೃತಜ್ಞತಾ ಸಮಾವೇಶದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರೈತ ಸಂಘದ ನಾಯಕರು ವಿವಿಧ ಬೇಡಿಕೆಗಳನ್ನು ಈಡೇರಿಸಲು ಮನವಿ ಪತ್ರಗಳನ್ನು ನೀಡಿದ್ದರು. ಆದರೆ ಈ ಮನವಿ ಪತ್ರಗಳು ಇದೀಗ ಕಸದ ಬುಟ್ಟಿ ಸೇರಿವೆ.
ರಾಜ್ಯದ ಮುಖ್ಯಮಂತ್ರಿಗಳಿಗೆ ನೇರವಾಗಿ ತಮ್ಮ ಮನವಿ ಪತ್ರವನ್ನು ಸಲ್ಲಿಸುವುದರಿಂದ, ತಮ್ಮ ಸಮಸ್ಯೆಗಳು ಆದಷ್ಟು ಬೇಗ ಪರಿಹಾರವಾಗಲಿದೆ ಎಂದು, ಗಂಟೆಗಟ್ಟಲೆ ಮಳೆ ಬಿಸಿಲನ್ನು ತಡೆದುಕೊಂಡು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡಿದರೆ, ಇದೀಗ ಅಂತಹ ಎಷ್ಟೋ ಸಮಸ್ಯೆಗಳನ್ನು ಒಳಗೊಂಡ ಪತ್ರಗಳು ಕಸದ ಬುಟ್ಟಿ ಸೇರಿರುವುದು ವಿಷಾದದ ಸಂಗತಿ. ಚಾಮರಾಜನಗರದಲ್ಲಿಯೂ ಕೂಡ ಅಂತಹ ಮನವಿ ಪತ್ರಗಳು ನಗರದ ಡಾ. ಬಿ.ಆರ್ ಅಂಬೇಡ್ಕರ್ ಕ್ರೀಡಾಂಗಣದ ಕಸದ ಬುಟ್ಟಿ ಸೇರಿದೆ. ಮುಖ್ಯಮಂತ್ರಿಗಳ ಈ ವರ್ತನೆಯನ್ನು ದುರಹಂಕಾರದ ಪರಮಾವಧಿ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ವತಃ ಮುಖ್ಯಮಂತ್ರಿಗಳಿಗೇ ನೀಡಿದ ಮನವಿ ಪತ್ರಗಳಿಗೆ ಈ ಪರಿಸ್ಥಿತಿ ಬಂದಿದೆ ಎಂದಾದರೆ, ಇನ್ನು ಅಧಿಕಾರಿಗಳಿಗೆ ಸಲ್ಲಿಸುವ ಮನವಿ ಪತ್ರಗಳ ಕಥೆ ಏನು? ಎಂದು ಜನರು ಕಿಡಿಕಾರಿದ್ದಾರೆ.